ಮಂಗಳೂರು :- ದಿನಾಂಕ 24 ಜುಲೈ 2022ರ ಭಾನುವಾರದಂದು ಮೇರು ಕೊಪ್ಪಳ ರಸ್ತೆ ಸಂಕು ಪೂಜಾರಿ ಇವರ ಹಡೀಲು ಬಿದ್ದಿರುವ ಗದ್ದೆಯ ಭೂಮಿಯಲ್ಲಿ ಯುವವಾಹಿನಿಯ ಸದಸ್ಯರಿಂದ ಬಿತ್ತನೆ ಬಿತ್ತಿ ಕೃಷಿ ಮಾಡುವ ಹಾಗೂ ಭತ್ತದ ನೇಜಿ ನೆಡುವ ಹೊಸ ಪ್ರಯತ್ನ ನಡೆಯಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಘಟಕದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷರಾದ ಸುನೀತ ಗೋಪಾಲಕೃಷ್ಣ, ಉಪಾಧ್ಯಕ್ಷರಾದ ಸರಸ್ವತಿ ಶ್ರೀನಿವಾಸ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಹಾಗೂ ಗದ್ದೆಯ ಯಜಮಾನರಾದ ಲೋಕೇಶ್ ಶೆಟ್ಟಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ರೇಖಾ ಗೋಪಾಲ್ ರವರು ಕೃಷಿ ಭೂಮಿಯಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಂಡು, ಭೂಮಿಯು ಹಸನು ಆಗುವಂತೆ ಮಾಡಬೇಕು ಹಾಗೂ ಮುಂದಿನ ಪೀಳಿಗೆಗೆ ವ್ಯವಸಾಯದ ಬಗ್ಗೆ ತಿಳುವಳಿಕೆ ಕಾರ್ಯಕ್ರಮಗಳು ನಡೆಯಬೇಕೆಂದರು. ಮಂಗಳೂರು ಘಟಕದ ಗೌರವ ಸದಸ್ಯರಾದ ಶ್ರೀನಿವಾಸ್ ಕೂಳೂರು ರವರು ಸುಮಾರು ಒಂದು ತಿಂಗಳಿನಿಂದ ನಾವು ಈ ಗದ್ದೆಯಲ್ಲಿ ಉಳುಮೆ ಕೆಲಸ ಮಾಡಿದ ಮತ್ತು ಬಿತ್ತನೆಗೆ ಬೀಜ ತಯಾರು ಮಾಡುವ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ರವರು ಮಾತನಾಡುತ್ತ ಯುವವಾಹಿನಿಯಲ್ಲಿ ಕೃಷಿಯು ಹೊಸ ಪ್ರಯತ್ನವಾಗಿದ್ದು, ಎರಡೂ ಘಟಕಗಳನ್ನು ಹಾಗೂ ಕೇಂದ್ರ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಯುವವಾಹಿನಿಯು ಕೃಷಿಯಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸುತ್ತಾ, ನೇಜಿಯನ್ನು ಮಂಗಳೂರು ಘಟಕದ ಅಧ್ಯಕ್ಷರಿಗೆ ಮತ್ತು ಮಹಿಳಾ ಘಟಕದ ಅಧ್ಯಕ್ಷರಿಗೆ ಹಸ್ತಾಂತರಿಸಿ, ಬಿತ್ತನೆಯ ಬೀಜವನ್ನು ರಮೇಶ್ ಪೂಜಾರಿಯವರಿಗೆ ಹಾಗೂ ಮಂಗಳೂರು ಘಟಕದ ಸಂಚಾಲಕರಾದ ಗೋಪಾಲ್ ಪೂಜಾರಿಯವರಿಗೆ ಹಸ್ತಾಂತರಿಸಿ ನೇಜಿ ನೆಡುವ ಹಾಗೂ ಬೀಜ ಬಿತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯುವವಾಹಿನಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಹಾಗೂ ನೆರೆಹೊರೆಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಯೆಯ್ಯಾಡಿ ಇದರ ಉಪಾಧ್ಯಕ್ಷರಾದ ಕುಸುಮ ಹೆಚ್. ದೇವಾಡಿಗ ರವರು ಯುವವಾಹಿನಿಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಕೃಷಿಯಲ್ಲಿ ಸದಸ್ಯರ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಘಟಕದ ಅಧ್ಯಕ್ಷರುಗಳು ಬಂದಂತಹ ಎಲ್ಲಾ ಅತಿಥಿಗಳಿಗೆ ಹಣ್ಣಿನ ಗಿಡವನ್ನು ನೀಡುವ ಮೂಲಕ ಧನ್ಯವಾದ ಸಮರ್ಪಿಸಿದರು. ಬಂದಂತಹ ಎಲ್ಲ ಬಂದುಗಳು ಉತ್ಸಾಹದಿಂದ ಗದ್ದೆಯಲ್ಲಿ ನೇಜಿ ನೆಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಮಾರು 75ಕ್ಕಿಂತಲೂ ಅಧಿಕ ಜನರು ವ್ಯವಸಾಯದಲ್ಲಿ ಆಸಕ್ತಿ ತೋರಿದ್ದು ಕಾರ್ಯಕ್ರಮದ ಸಾರ್ಥಕತೆಗೆ ಸಾಕ್ಷಿಯಾಯಿತು. ಸಾಮೂಹಿಕ ಗುರು ಸ್ತೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ ಕೋಡಿಕಲ್ ರವರು ಅತಿಥಿಗಳನ್ನು ಹಾಗೂ ಬಂಧುಗಳನ್ನು ಸ್ವಾಗತಿಸಿದರು.