
ಮಂಗಳೂರು : ಬಿರುವೆರ್ ಕುಡ್ಲ ಸಹಯೋಗದೊಂದಿಗೆ ಎನ್ ಬಿ ಗ್ರೂಪ್ ಮತ್ತು ಎಚ್ ಎಫ್ ಕೆ ಸಹಕಾರದೊಂದಿಗೆ ಸುದೀಕ್ಷಾ ಕಿರಣ್ ಸುವರ್ಣ ನೇತ್ರತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ಅಕ್ಷತಾ ಸುಧೀರ್ ಪೂಜಾರಿ ಮಿಸ್ಸೆಸ್ ಬಿಲ್ಲವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ನಗರದ ಖಾಸಗಿ ಹೋಟೇಲಿನಲ್ಲಿ ದಿನಾಂಕ 26.05.2019 ರಂದು ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸುಮಾರು 36 ಸ್ಪರ್ಧಿಗಳಿದ್ದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿ ಕಿರಣ್ ಕುಮಾರ್, ನಿಶಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಚಲನಚಿತ್ರ ನಟರಾದ ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ನಟಿ ಕರೀಷ್ಮಾ ಅಮೀನ್, ಮಾಡೆಲ್ ನವೀನ್ ಬಿಲ್ಲವ ಉಪಸ್ಥಿತರಿದ್ದರು. ನಿರೂಪಕಿ ಸೌಜನ್ಯ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಬಹುಮುಖ ಪ್ರತಿಭೆ ಅಕ್ಷತಾ ಸುಧೀರ್ ಪೂಜಾರಿ ಅವರು ಯುವವಾಹಿನಿ ಲೋಗೋ ರಚಿಸಿದ ಕಲಾಕಾರ ಮೋಹನ್ ಪೆರ್ಮುದೆಯವರ ಸುಪುತ್ರಿ ಹಾಗೂ ಯುವವಾಹಿನಿ ಬೆಂಗಳೂರು ಘಟಕದ ಸ್ಥಾಪಕ ಅಧ್ಯಕ್ಷ ಸುಧೀರ್ ಪೂಜಾರಿಯವರ ಪತ್ನಿ.



