ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಜಿಲ್ಲೆ 1381ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಬೋಳಾರ್ ಮಾತನಾಡಿ, “ಯುವವಾಹಿನಿ ಕ್ರೀಡೋತ್ಸವ ಅತ್ಯಂತ ಶಿಸ್ತುಬದ್ಧವಾಗಿ ನಡೆದಿದ್ದು, ಸಮಾಜದ ಸಂಘಟನಾ ಶಕ್ತಿಯನ್ನು ಕಂಡು ಹೆಮ್ಮೆಯಾಯಿತು. ಶ್ರೀ ನಾರಾಯಣ ಗುರುಗಳ ‘ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ’ ಎಂಬ ಸಂದೇಶಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ವಿವಿಧ ಸಮಾಜದ ಬಾಂಧವರನ್ನು ಒಗ್ಗೂಡಿಸಿರುವುದು ಶ್ಲಾಘನೀಯ. ನಾನು ಈ ಮಟ್ಟಕ್ಕೆ ಬೆಳೆದು ನಾಯಕನಾಗಿ ರೂಪುಗೊಳ್ಳಲು ಯುವವಾಹಿನಿ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರೊ.ಸತೀಶ್ ಬೋಳಾರ್ ಇವರನ್ನು ಅಭಿನಂದಿಸಲಾಯಿತು ಸನ್ಮಾನಿತರ ಸಾಧನಾ ಪರಿಚಯವನ್ನು ರಕ್ಷಾ ರೆಂಜಾಳ ಸಭೆಗೆ ತಿಳಿಸಿದರು.

ನಮ್ಮ ಕುಡ್ಲ ವಾರ್ತಾವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸುಚರಿತ ಶೆಟ್ಟಿ, ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು
ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದ ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡ ಯುವವಾಹಿನಿಯ 34 ಘಟಕಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕ್ರೀಡೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಸ್ಪರ್ಧೆಗಳ ಮೂಲಕ ಯುವಕರಲ್ಲಿ ಕ್ರೀಡಾಸಕ್ತಿ, ಶಿಸ್ತು, ತಂಡದ ಮನೋಭಾವ ಹಾಗೂ ಪರಸ್ಪರ ಸೌಹಾರ್ದತೆಯನ್ನು ಬೆಳೆಸುವ ಯುವವಾಹಿನಿಯ ಪ್ರಯತ್ನಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು, ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಎ. ಕೋಟ್ಯಾನ್ ಹಾಗೂ ಮೂಡುಬಿದಿರೆ ಘಟಕದ ಕ್ರೀಡಾ ನಿರ್ದೇಶಕ ಪ್ರಸಾದ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ವಂದಿಸಿದರು. ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ ದಿನೇಶ್ ಸುವರ್ಣ ರಾಯಿ ಹಾಗೂ ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







