ಹೆಜಮಾಡಿ ನ 22 : ಕ್ರೀಡಾಸ್ಫೂರ್ತಿ, ಸಂಘಟನಾ ಶಕ್ತಿ ಹಾಗೂ ಸಾಮರಸ್ಯದ ಸಂದೇಶ ಸಾರಿದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ‘ಕೋಟಿ–ಚೆನ್ನಯ ಅತಿರಥ ಟ್ರೋಫಿ 2026’ ನವೆಂಬರ್ 22ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಹೆಜಮಾಡಿ ಬಿಲ್ಲವರ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಹೆಜಮಾಡಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸಿ ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಕ್ರೀಡಾ ಕೌಶಲವನ್ನು ಪ್ರದರ್ಶಿಸಿದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷ ಪ್ರಥಮೇಶ್ ಪಿ. ಬಂಗೇರ ವಹಿಸಿದ್ದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹಾಗೂ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಉದ್ಘಾಟಿಸಿದರು. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಧ್ವಜಾರೋಹಣ ನೆರವೇರಿಸಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಟ್ರೋಫಿ ಅನಾವರಣಗೊಳಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ದಯಾನಂದ ಹೆಜಮಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಘಟಕದ ಉಪಾಧ್ಯಕ್ಷೆ ಪ್ರಾಪ್ತಿ ಆರ್. ಸುವರ್ಣ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಧೀರಜ್ ವಂದಿಸಿದರು.

ಕಾವಳಪಡೂರು ವಗ್ಗ ಮತ್ತು ಬಜಗೋಳಿ ತಂಡಗಳಿಗೆ ಪ್ರಥಮ ಸ್ಥಾನ : ಪುರುಷರ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಬಿಲ್ಲವ ಸಮಾಜ ಸೇವಾ ಸಂಘ ಕಾವಳಪಡೂರು ವಗ್ಗದ ‘B’ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಇದೇ ಸಂಘದ ‘A’ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಬಲರಾಮ ಫ್ರೆಂಡ್ಸ್ ಮಲ್ಪೆ ತಂಡ ತೃತೀಯ ಹಾಗೂ ಕಂಬಳ ಫ್ರೆಂಡ್ಸ್ ಹೆಜಮಾಡಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಬಿಲ್ಲವ ಸಂಘ (ರಿ.) ಬಜಗೋಳಿ ತಂಡ ಪ್ರಥಮ ಸ್ಥಾನ ಗಳಿಸಿತು. ಬಿಲ್ಲವ ಸಮಾಜ ಸೇವಾ ಸಂಘ ಕಾವಳಪಡೂರು–ವಗ್ಗ ತಂಡ ದ್ವಿತೀಯ, ಬಿಲ್ಲವ ಸಂಘ (ರಿ.) ನಿಟ್ಟೆ ತಂಡ ತೃತೀಯ ಹಾಗೂ ಐರನ್ ಉದ್ಯಾವರ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಥಮೇಶ್ ಪಿ. ಬಂಗೇರ ವಹಿಸಿದ್ದರು. ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳ ಕ್ರೀಡಾಸ್ಫೂರ್ತಿ ಮತ್ತು ಪ್ರದರ್ಶನವನ್ನು ಗಣ್ಯರು ಶ್ಲಾಘಿಸಿದರು. ಕ್ರೀಡೆಯ ಮೂಲಕ ಯುವಜನರಲ್ಲಿ ದೈಹಿಕ ಸಾಮರ್ಥ್ಯ, ಶಿಸ್ತು, ಒಗ್ಗಟ್ಟು ಮತ್ತು ಸಂಘಟನಾ ಮನೋಭಾವ ಬೆಳೆಸುವ ಉದ್ದೇಶದೊಂದಿಗೆ ನಡೆದ ಕೋಟಿ–ಚೆನ್ನಯ ಅತಿರಥ ಟ್ರೋಫಿ 2026 ಕ್ರೀಡಾಕೂಟವು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಉತ್ಸಾಹಭರಿತ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.




