ಉಡುಪಿ ನ 01 : “ವಿದ್ಯೆ, ಉದ್ಯೋಗ, ಸಂಪರ್ಕ” ಎಂಬ ಧ್ಯೇಯವಾಕ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ.) ಉಡುಪಿ ಘಟಕದ ಆತಿಥ್ಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ 2026ನೇ ಸಾಲಿನ ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 1ರಂದು ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ನಡೆಯಿತು.

ಸಾಹಿತಿ ಹಾಗೂ ಲೇಖಕ ಬಿಪಿನ್ ಚಂದ್ರ ಪಾಲ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ಅಧ್ಯಕ್ಷತೆ ವಹಿಸಿದ್ದರು.
ಕರಾವಳಿಯ ಮಣ್ಣಿನಲ್ಲಿ ಜನಿಸಿ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವಿಶುಕುಮಾರ್ ಅವರು ಕಥೆಗಾರ, ಕಾದಂಬರಿಕಾರ, ನಟ, ನಾಟಕಕಾರ, ಬರಹಗಾರ ಹಾಗೂ ಕನ್ನಡ ಮತ್ತು ತುಳು ಚಲನಚಿತ್ರಗಳ ನಿರ್ದೇಶಕರಾಗಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡವರು. ಅವರ ಸಾಹಿತ್ಯಿಕ ಹಾಗೂ ಕಲಾತ್ಮಕ ಕೊಡುಗೆಗಳ ಸ್ಮರಣಾರ್ಥ ಯುವವಾಹಿನಿ ಸಂಸ್ಥೆಯು ಪ್ರತಿವರ್ಷ ವಿಶುಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದೆ. ಈ ಬಾರಿಯ 2026ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಯನ್ನು ತುಳುನಾಡಿನ ಜಾನಪದ ಸಂಸ್ಕೃತಿಯ ಅಧ್ಯಯನ, ಸಂಶೋಧನೆ ಹಾಗೂ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಜಾನಪದ ವಿದ್ವಾಂಸ, ಸಾಹಿತಿ ಮತ್ತು ಸಂಶೋಧಕ ಬನ್ನಂಜೆ ಬಾಬು ಅಮೀನ್ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಪ್ರದಾನ ಮಾಡಿದರು.

ಸಂಸ್ಕೃತಿಯ ಬೇರುಗಳನ್ನು ಉಳಿಸುವ ಕೆಲಸ ಇಂದಿನ ಅಗತ್ಯ – ಡಾ. ಮೋಹನ್ ಆಳ್ವ
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಮೋಹನ್ ಆಳ್ವ ಅವರು, ತುಳುನಾಡಿನ ಜಾನಪದ ಪರಂಪರೆ ನಮ್ಮ ನೆಲದ ಜೀವನಶೈಲಿ, ಆಚಾರ-ವಿಚಾರ, ನಂಬಿಕೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಪ್ರತಿಬಿಂಬವಾಗಿದೆ. ಇಂತಹ ಅಮೂಲ್ಯ ಪರಂಪರೆಯನ್ನು ಅಧ್ಯಯನ ಮಾಡಿ ದಾಖಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಬನ್ನಂಜೆ ಬಾಬು ಅಮೀನ್ ಅವರು ತಮ್ಮ ಬದುಕಿನ ಬಹುಭಾಗವನ್ನು ಜಾನಪದ ಸಂಸ್ಕೃತಿಯ ಅಧ್ಯಯನ ಮತ್ತು ಸಂರಕ್ಷಣೆಗೆ ಮೀಸಲಿಟ್ಟಿರುವುದು ಶ್ಲಾಘನೀಯ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರಶಸ್ತಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಜಾನಪದ ಸಂಸ್ಕೃತಿ ನಮ್ಮ ಬದುಕಿನ ಜೀವಂತ ಇತಿಹಾಸ – ಡಾ. ತುಕರಾಮ ಪೂಜಾರಿ
ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಅವರು ಅಭಿನಂದನಾ ಭಾಷಣ ಮಾಡಿ, ತುಳುನಾಡಿನ ಜಾನಪದ ಪರಂಪರೆಯು ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ ನಮ್ಮ ಪೂರ್ವಜರ ಬದುಕು, ಅನುಭವ, ಜ್ಞಾನ ಮತ್ತು ಜೀವನಮೌಲ್ಯಗಳನ್ನು ಒಳಗೊಂಡಿರುವ ಜೀವಂತ ಇತಿಹಾಸವಾಗಿದೆ. ಈ ಪರಂಪರೆಯನ್ನು ಸಂಶೋಧನೆ ಮತ್ತು ದಾಖಲಾತಿಗಳ ಮೂಲಕ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಬನ್ನಂಜೆ ಬಾಬು ಅಮೀನ್ ಅವರು ಸಲ್ಲಿಸಿರುವ ಕೊಡುಗೆ ಮಹತ್ವದ್ದಾಗಿದೆ. ಅವರ ಸುದೀರ್ಘ ಸಾಂಸ್ಕೃತಿಕ ಸೇವೆಗೆ ವಿಶುಕುಮಾರ್ ಪ್ರಶಸ್ತಿ ಸಂದಿರುವುದು ಸೂಕ್ತ ಗೌರವವಾಗಿದೆ ಎಂದು ತಿಳಿಸಿದರು.

ಕಾವ್ಯ ಸಾಹಿತ್ಯ ಕ್ಷೇತ್ರದಲ್ಲಿ ಸೃಜನಶೀಲ ಅಭಿವ್ಯಕ್ತಿಯ ಮೂಲಕ ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ತಜ್ಞಾ ರಾಜೀವ್ ಅವರಿಗೆ ಡಾ. ಪ್ರಭಾಕರ್ ನೀರ್‌ಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಗೋವಾದ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ್ ಅಮೀನ್ ಹಾಗೂ ಸಾಹಿತಿ ವಿಶುಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶುಕುಮಾರ್ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ ಪ್ರಭಾಕರ ನೀರ್‌ಮಾರ್ಗ, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸದಸ್ಯರಾದ ಟಿ ಶಂಕರ್ ಸುವರ್ಣ, ನರೇಶ್ ಕುಮಾರ್ ಸಸಿಹಿತ್ಲು, ಹಾಗೂ ಉದಯ ಅಮೀನ್ ಮಟ್ಟು ಇವರನ್ನು ಗೌರವಿಸಲಾಯಿತು
ಯುವ ಪ್ರತಿಭೆಗಳಿಗೆ ಬಹುಮಾನ ವಿತರಣೆ
ಸಮಾರಂಭದ ಅಂಗವಾಗಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಯುವ ಸಿನಿದನಿ ಕಿರುಚಿತ್ರ ಸ್ಪರ್ಧೆ, ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಹಿತ್ಯ, ಜ್ಞಾನ, ಚಲನಚಿತ್ರ ಹಾಗೂ ಸೃಜನಶೀಲ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಸ್ಪರ್ಧೆಗಳು ಯುವಜನರಲ್ಲಿ ಹೊಸ ಉತ್ಸಾಹ ಮೂಡಿಸಿದವು. ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆಗಳನ್ನೊಳಗೊಂಡ ವಿಶು ಸಂಗಮ ಪುಸ್ತಕ ಬಿಡುಗಡೆಗೊಳಿಸಲಾಯಿತು

ಹಿರಿಯ ಸಾಧಕರ ಅನುಭವ, ಸಾಹಿತ್ಯದ ಮೌಲ್ಯಗಳು ಹಾಗೂ ಯುವ ಪ್ರತಿಭೆಗಳ ಸೃಜನಶೀಲತೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ ಈ ಸಮಾರಂಭವು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಗೌರವಿಸುವುದರೊಂದಿಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಆಶಯಕ್ಕೆ ಸಾಕ್ಷಿಯಾಯಿತು. ಯುವವಾಹಿನಿ ಉಡುಪಿ ಘಟಕದ ನಿಕಟಪೂರ್ವ ಅಧ್ಯಕ್ಷ ದಯಾನಂದ ಉಪ್ಪೂರು ಸ್ವಾಗತಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಉಡುಪಿ ಪ್ರಸ್ತಾವನೆಗೈದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ, ಕಾರ್ಯದರ್ಶಿ ವೀಕ್ಷಿತ್ ಕುಮಾರ್, ಕಲೆ ಮತ್ತು ಸಾಹಿತ್ಯ ನಿರ್ದೇಶಕ ಸಂದೇಶ್ ಕಟಪಾಡಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.









