ಕಡಬ ನ. 22 : ಯುವವಾಹಿನಿ (ರಿ.) ಕಡಬ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವು ನವೆಂಬರ್ 22ರಂದು ಕಡಬದ ಜಯದುರ್ಗಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ.) ಕಡಬ ತಾಲೂಕು ಇದರ ಅಧ್ಯಕ್ಷ ಸತೀಶ್ ಕೆ. ಐತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ (ರಿ.) ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2026–27ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಸರಿತಾ ಉಂಡಿಲ, ಕಾರ್ಯದರ್ಶಿಯಾಗಿ ಧನಂಜಯ ಮರ್ಧಾಳ ಹಾಗೂ ಕೋಶಾಧಿಕಾರಿಯಾಗಿ ಸವಿತಾ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಸಂಘಟನಾ ಕಾರ್ಯದರ್ಶಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್.ಎಸ್. ಕಡಬ ನೂತನ ಕಾರ್ಯಕಾರಿ ಸಮಿತಿಯನ್ನು ಸಭೆಗೆ ಪರಿಚಯಿಸಿದರು.

ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಜಯರಾಮ್ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಸುಂದರ ಕರ್ಕೇರ ಮರ್ಧಾಳ ವಿದ್ಯಾನಿಧಿ ವಿತರಿಸಿ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಡಬ ತಾಲೂಕಿನ ಬಿಲ್ಲವ ಸಮಾಜದ ಸಾಧಕರಾದ ರವಿ ಕಕ್ಯಪದವು, ಉಷಾ ಅಂಚನ್ ಹಾಗೂ ಪುಷ್ಪಾವತಿ ಕೇಕುಡೆ ಅವರನ್ನು ಸನ್ಮಾನಿಸಲಾಯಿತು. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಎನ್.ಎಸ್. ಕಡಬ ಅವರನ್ನೂ ಗೌರವಿಸಲಾಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ ಹಾಗೂ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಗಣ ಅವರನ್ನು ಅಭಿನಂದಿಸಲಾಯಿತು.
ನಿರ್ಗಮನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಅಧ್ಯಕ್ಷರು, ಸದಸ್ಯರು, ಕೇಂದ್ರ ಸಮಿತಿಯ ಕಾರ್ಯಕಾರಿ ಸದಸ್ಯರು, ಬಿಲ್ಲವ ಸಂಘದ ಪದಾಧಿಕಾರಿಗಳು, ಸಮಾಜದ ಗಣ್ಯರು, ಬಿಲ್ಲವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರು, ಯುವವಾಹಿನಿ ಬಂಧುಗಳು ಹಾಗೂ ಘಟಕದ ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.
ಶ್ರೇಯಾ ವಿದ್ಯಾನಗರ ಪ್ರಾರ್ಥಿಸಿದರು. ವಾರ್ಷಿಕ ವರದಿಯನ್ನು ಸತೀಶ್ ಕೊರಪ್ಪಣೆ ಮಂಡಿಸಿದರು. ಕೌಶಿಕ್ ಅಲಂಕಾರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಧನಂಜಯ ಮರ್ಧಾಳ ವಂದಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.




