ಖುಷಿ ಅಲಗುಂದಿಗೆ ‘ಕಲಾಶ್ರೀ’, ನವ್ಯ ಪಿ. ಓಲೇಕರ್‌ಗೆ ‘ಕಲಾರತ್ನ’ ಪ್ರಶಸ್ತಿ ಪ್ರದಾನ
ಪಡುಬಿದ್ರಿ ನ 22 : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರ ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಆಸಕ್ತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ 16ನೇ ವರ್ಷದ ಮಕ್ಕಳ ಹಬ್ಬ ಕಾರ್ಯಕ್ರಮವು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ ವಿಭಾಗ)ದಲ್ಲಿ ನವೆಂಬರ್ 22 ಭಾನುವಾರ ನಡೆಯಿತು.

ಶಾಲೆಯ ವಿದ್ಯಾರ್ಥಿ ನಾಯಕಿ ಕು. ತನಿಷಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ, ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶು ಕುಮಾರ್ ಶೆಟ್ಟಿ, ಕೆಪಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಎಸ್‌ಡಿಎಂಸಿ ಉಪಾಧ್ಯಕ್ಷ ವಸಂತ್ ಹಾಗೂ ನಾಮನಿರ್ದೇಶಿತ ಸದಸ್ಯ ಹೇಮಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.
ಸಂಸ್ಕೃತಿ ಮತ್ತು ಸಂಸ್ಕಾರ ಮಕ್ಕಳ ಬದುಕಿನ ಆಧಾರವಾಗಲಿ : ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಇದರ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು, ಕಳೆದ 16 ವರ್ಷಗಳಿಂದ ಮಕ್ಕಳಿಗಾಗಿ ಮಕ್ಕಳ ಹಬ್ಬ ಆಯೋಜಿಸುತ್ತಿರುವ ಯುವವಾಹಿನಿ ಪಡುಬಿದ್ರಿ ಘಟಕದ ಕಾರ್ಯ ಶ್ಲಾಘನೀಯ. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ತಿಳಿಸಬೇಕು. ಸಣ್ಣ ವಯಸ್ಸಿನಲ್ಲಿಯೇ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಪೋಷಕರು ನಿಗಾ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಆಧ್ಯಾ ಫೌಂಡೇಶನ್ ಉಳ್ಳೂರು ಅಧ್ಯಕ್ಷ ರಾಕೇಶ್ ಅಜಿಲ ಕೆ.ಆರ್. ಮಾತನಾಡಿ, ದೇಶದ ಸಂಸ್ಕೃತಿಯೊಂದಿಗೆ ರಾಷ್ಟ್ರೀಯ ಏಕತೆಗೂ ಆದ್ಯತೆ ನೀಡಬೇಕು. ಯುವ ಸಮುದಾಯವು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮಾರಕ ಪ್ರವೃತ್ತಿಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಕೆ. ಸದಾನಂದ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಕೆಪಿಎಸ್ ಪಡುಬಿದ್ರಿ ಪ್ರಾಂಶುಪಾಲೆ ಡಾ. ಸುಮಾ ಎಸ್. ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೈಲಜಾ ಜಿ.ಎನ್. ಮಾತನಾಡಿದರು.
ಖುಷಿಗೆ ಕಲಾಶ್ರೀ, ನವ್ಯಗೆ ಕಲಾರತ್ನ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಶೇಷ ಸಾಧನೆ ಮಾಡಿದ 4ನೇ ತರಗತಿಯ ಖುಷಿ ಅಲಗುಂದಿ ಅವರಿಗೆ ‘ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳ ವಿಭಾಗದಲ್ಲಿ ವಿಶೇಷ ಸಾಧನೆಗೈದ 6ನೇ ತರಗತಿಯ ನವ್ಯ ಪಿ. ಓಲೇಕರ್ ಅವರಿಗೆ ‘ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ : ಸಹಕಾರಿ ರತ್ನ ಪುರಸ್ಕೃತ ವೈ. ಸುಧೀರ್ ಕುಮಾರ್, ಉಪನ್ಯಾಸಕ ಹರೀಶ್ ಕೋಟ್ಯಾನ್ ಉಳ್ಳೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪೃಥ್ವಿನ್ ಹರೀಶ್ ಅಂಚನ್, ತೇಜಲ್ ಪಿ. ಕೋಟ್ಯಾನ್, ಪ್ರಾಚಿ, ಅಕ್ಷಯ್ ಗಂಗಾಧರ್ ಕೋಟ್ಯಾನ್ ಮತ್ತು ನಕ್ಷತ್ರ ಅವರನ್ನು ಸನ್ಮಾನಿಸಲಾಯಿತು.
ಅಭಿಷೇಕ್ ಕೋಟ್ಯಾನ್ ಪ್ರಾಯೋಜಿತ ವಿದ್ಯಾರ್ಥಿವೇತನ ವಿತರಣೆ, ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಿತು. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಕೆ. ಸದಾನಂದ ಪೂಜಾರಿ, ಆಧ್ಯಾ ಫೌಂಡೇಶನ್ ಅಧ್ಯಕ್ಷ ರಾಕೇಶ್ ಅಜಿಲ ಕೆ.ಆರ್., ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್, ಕೆಪಿಎಸ್ ಪ್ರಾಂಶುಪಾಲೆ ಡಾ. ಸುಮಾ ಎಸ್., ಮುಖ್ಯ ಶಿಕ್ಷಕಿ ಶೈಲಜಾ ಜಿ.ಎನ್. ಹಾಗೂ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಹರೀಶ್ ಕೋಟ್ಯಾನ್ ಉಳ್ಳೂರು ಉಪಸ್ಥಿತರಿದ್ದರು.
ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕ ಹರೀಶ್ ಕೋಟ್ಯಾನ್ ಉಳ್ಳೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರವಿರಾಜ್ ಎನ್. ಕೋಟ್ಯಾನ್ ಪ್ರಸ್ತಾವನೆಗೈದರು. ಸುಷ್ಮಾ ಹಾಗೂ ಪ್ರಕಾಶ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮ ವಿಧಿತ್ ಬಹುಮಾನಿತರ ಪಟ್ಟಿ ವಾಚಿಸಿದರು. ಘಟಕದ ಕಾರ್ಯದರ್ಶಿ ರಾಜೇಶ್ವರಿ ಅವಿನಾಶ್ ವಂದಿಸಿದರು.




