ಮಂಗಳೂರು ನ. 08 : ಹುಟ್ಟುಹಬ್ಬವೆಂಬುದು ಕೇವಲ ವೈಯಕ್ತಿಕ ಸಂಭ್ರಮವಲ್ಲ, ಅದನ್ನು ಸಮಾಜದೊಂದಿಗೆ ಹಂಚಿಕೊಂಡಾಗ ಅದರ ಸಾರ್ಥಕತೆ ಹೆಚ್ಚುತ್ತದೆ ಎಂಬ ಆಶಯದೊಂದಿಗೆ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ದಿನಾಂಕ 08-11-2026ರಂದು ಮಂಗಳೂರಿನ ಪಡೀಲ್ನಲ್ಲಿರುವ ಸಂವೇದನಾ ಮಕ್ಕಳ ಮನೆಯಲ್ಲಿ ‘ಧನ್ಯತೆಯ ಬೆಳಕು’ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪುಟ್ಟ ಮಗು ಧನ್ವಿಕಾಳ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸುವ ಮೂಲಕ ಪ್ರೀತಿ, ವಾತ್ಸಲ್ಯ ಹಾಗೂ ಮಾನವೀಯ ಸೇವೆಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ದೀಪ ಪ್ರಜ್ವಲನೆ ನೆರವೇರಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಮಕ್ಕಳಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಯಿತು. ಘಟಕದ ಸಂಘಟನಾ ಕಾರ್ಯದರ್ಶಿ ಶುಭಾ ಪೆರ್ನೆ ಹಾಗೂ ವಿದ್ಯಾರ್ಥಿ ಸಂಘಟನೆಯ ಸದಸ್ಯೆ ಕುಮಾರಿ ಭವಿಷ್ಯ ಅವರು ಆಟಗಳನ್ನು ಉತ್ಸಾಹದಿಂದ ನಡೆಸಿಕೊಟ್ಟರು. ಆಟಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸಂವೇದನಾ ಮಕ್ಕಳ ಮನೆಯ ಪ್ರತಿಯೊಬ್ಬ ಮಗುವಿಗೂ ಹೊಸ ಬಟ್ಟೆ ಹಾಗೂ ಊಟದ ತಟ್ಟೆಗಳನ್ನು ಪ್ರೀತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ವಿದ್ಯಾ ರಾಕೇಶ್ ಮಾತನಾಡಿ, ವಿಶೇಷ ಮಕ್ಕಳೊಂದಿಗೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮಾಣಿ ಘಟಕದ ಕಾರ್ಯವನ್ನು ಶ್ಲಾಘಿಸಿದರು. ಸಮಾಜಮುಖಿ ಚಿಂತನೆಯೊಂದಿಗೆ ಮಕ್ಕಳ ಸಂತೋಷದಲ್ಲಿ ಭಾಗಿಯಾಗಿರುವುದು ಅತ್ಯಂತ ಅಭಿನಂದನೀಯ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ನೂತನ ಕಟ್ಟಡ ಸಮಿತಿಯ ಸಂಚಾಲಕರಾದ ಹರೀಶ್ ಪೂಜಾರಿ ಮಾತನಾಡಿ, ವಿಶೇಷ ಮಕ್ಕಳೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಇಂತಹ ಕಾರ್ಯಕ್ರಮಗಳು ಯುವವಾಹಿನಿಯ ಸಮಾಜಮುಖಿ ಕಾರ್ಯಗಳಿಗೆ ನಿಜವಾದ ಅರ್ಥ ಮತ್ತು ಮೌಲ್ಯವನ್ನು ನೀಡುತ್ತವೆ. ಸಮಾಜದ ಒಳಿತಿಗಾಗಿ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ನಂತರ ಯುವವಾಹಿನಿ ಕೇಂದ್ರ ಸಮಿತಿಯ ನೂತನ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಸಂವೇದನಾ ಮಕ್ಕಳ ಮನೆಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಜಯಲಕ್ಷ್ಮಿ ಅಮೀನ್ ಅವರು ಅಲ್ಲಿನ ಮಕ್ಕಳ ಪರಿಸ್ಥಿತಿ, ಆರೈಕೆ, ಶಿಕ್ಷಣ ಹಾಗೂ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ವಿಶೇಷ ಮಕ್ಕಳ ಜೀವನ ಹಾಗೂ ಅವರ ಅಗತ್ಯಗಳನ್ನು ಅರಿತ ಮಾಣಿ ಘಟಕದ ಸದಸ್ಯರು ಭಾವುಕರಾಗಿ, ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಧನಸಹಾಯ ನೀಡಲು ಮುಂದಾದರು. ಸದಸ್ಯರ ಸಹಕಾರದಿಂದ ಒಟ್ಟು ₹26,500 ಮೊತ್ತವನ್ನು ಸಂವೇದನಾ ಮಕ್ಕಳ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೀತಿಪೂರ್ವಕವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ, ಉಪಾಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಾಲ, ಜಯಂತ ಬರಿಮಾರು, ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸೇರಿದಂತೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬಂಟ್ವಾಳ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಟ್ಟ ಧನ್ವಿಕಾಳಿಗೆ ಪ್ರಥಮ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 150ಕ್ಕೂ ಅಧಿಕ ಮಂದಿ ಭಾಗವಹಿಸಿ, ವಿಶೇಷ ಮಕ್ಕಳೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಗು, ಆಟ, ಸಂಭ್ರಮ ಹಾಗೂ ಪ್ರೀತಿಯ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹುಟ್ಟುಹಬ್ಬದ ಸಂಭ್ರಮವನ್ನು ನಾಲ್ಕು ಗೋಡೆಗಳ ಕುಟುಂಬದ ಆಚರಣೆಗೆ ಸೀಮಿತಗೊಳಿಸದೆ, ವಿಶೇಷ ಮಕ್ಕಳೊಂದಿಗೆ ಹಂಚಿಕೊಂಡು ಅವರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸಂಭ್ರಮ. ಧನ್ವಿಕಾಳ ಪ್ರಥಮ ವರ್ಷದ ಹುಟ್ಟುಹಬ್ಬವು ಹಲವು ಮಕ್ಕಳ ಪಾಲಿಗೆ ಸಂತೋಷದ ದಿನವಾಗಿ, ಶಿಕ್ಷಣಕ್ಕೆ ನೆರವಾಗುವ ಸಹಕಾರದ ಹಸ್ತವಾಗಿ ಮೂಡಿಬಂದಿತು. ಪ್ರೀತಿ, ವಾತ್ಸಲ್ಯ, ಸಹಾನುಭೂತಿ ಮತ್ತು ಸೇವೆಯ ಮೂಲಕ ಯುವವಾಹಿನಿ (ರಿ.) ಮಾಣಿ ಘಟಕದ ‘ಧನ್ಯತೆಯ ಬೆಳಕು’ ಕಾರ್ಯಕ್ರಮವು ನಿಜಕ್ಕೂ ಸಾರ್ಥಕತೆಯ ಬೆಳಕಾಗಿ ಮೂಡಿಬಂತು.







