ಮುಲ್ಕಿ ನ 07 : ಸರ್ವಧರ್ಮ ಭಾವೈಕ್ಯತೆಯ ಮೂಲಕ ದೀಪಾವಳಿ ಆಚರಿಸುವ ಯುವವಾಹಿನಿಯ ಕಾರ್ಯ ಅಭಿನಂದನೀಯ. ಇಂದಿನ ಯುವಜನಾಂಗಕ್ಕೆ ಹಿಂದಿನ ಕಾಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವ ಕಾರ್ಯ ನಿರಂತರವಾಗಿ ನಡೆಯಬೇಕು. ದೀಪಾವಳಿ ಆಚರಣೆಯ ಮೂಲಕ ಎಲ್ಲರ ಮನೆ ಮನಗಳಲ್ಲಿ ಬೆಳಕು ಮೂಡಲಿ, ಲೋಕದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ ಬೆರ್ನಾಡ್ ಹೇಳಿದರು.

ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಮುಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ‘ತುಳುವೆರೆ ತುಡರ್ ಪರ್ಬ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ. ನರಸಿಂಹ ಭಟ್ ಅವರು ಆಶೀರ್ವಚನ ನೀಡಿದರು. ಬ್ಯಾರಿ ಪರಿಷತ್ ಮುಲ್ಕಿ ತಾಲೂಕು ಅಧ್ಯಕ್ಷ ನಿಸಾರ್ ಅಹ್ಮದ್ ಅಂಗರಗುಡ್ಡೆ ಹಾಗೂ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ವೇದ ಜಯ ಕುಬೇರ್, ಕಾರ್ಯಕ್ರಮ ನಿರ್ದೇಶಕರಾದ ಚಿತ್ರ ಜತ್ತನ್ ಹಾಗೂ ಮೇಘನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಲ್ಕಿ ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷರಾದ ಕರಿಯ ಪೂಜಾರಿ ಅವರಿಗೆ ‘ಪರ್ಬದ ತಮ್ಮನ’ ನೀಡಿ ಗೌರವಿಸಲಾಯಿತು. ಸಮಾಜಮುಖಿ ಕಾರ್ಯದ ಭಾಗವಾಗಿ ಘಟಕದ ಸದಸ್ಯರಾದ ಅಶೋಕ್ ಕರ್ಕೇರ, ವಿಜಯಕುಮಾರ್ ಕುಬೇವೂರು, ಮಾಧವ ಪೂಜಾರಿ ಕಿಲ್ಪಾಡಿ, ಜಯ ಸಿ. ಪೂಜಾರಿ, ಶಕೀಲಾ, ಹರೀಂದ್ರ ಸುವರ್ಣ ಹಾಗೂ ಸುಲೋಚನ ಜಿ. ಅಂಚನ್ ಅವರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ವಿತರಿಸಲಾಯಿತು.
ತುಳುವೆರೆ ತುಡರ್ ಪರ್ಬದ ಅಂಗವಾಗಿ ಸಾರ್ವಜನಿಕರಿಗಾಗಿ ಗೂಡು ದೀಪ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಿಂಚನ ಹಾಗೂ ಮೇಘನ ಪ್ರಾರ್ಥಿಸಿದರು. ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ಜಯ ಕುಬೇರ್ ಬಲೀಂದ್ರ ಪೂಜೆ ನೆರವೇರಿಸಿದರು. ಮಾಜಿ ಅಧ್ಯಕ್ಷ ಭರತೇಶ ಮಟ್ಟು ಪ್ರಸ್ತಾವನೆಗೈದರು. ಸದಸ್ಯೆ ಪ್ರೀತಿಕ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ವೇದ ಜಯ ಕುಬೇರ್ ವಂದಿಸಿದರು. ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ಸಾಮರಸ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಒಗ್ಗೂಡಿಸಿದ ತುಳುವೆರೆ ತುಡರ್ ಪರ್ಬ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತು.







