ಉಡುಪಿ ಅ 20 : ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಶೈಕ್ಷಣಿಕ ನೆರವು ಒದಗಿಸುವ ಅರ್ಥಪೂರ್ಣ ಕಾರ್ಯಕ್ರಮವು ಅಕ್ಟೋಬರ್ 20ರಂದು ನಡೆಯಿತು.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬಜಿರಡ್ಕದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಪ್ರಿಯಾಂಕ ಅವರು ಶೇ. 93 ಅಂಕಗಳನ್ನು ಗಳಿಸಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಸಿ.ಎ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಉನ್ನತ ಶಿಕ್ಷಣಕ್ಕೆ ಅಗತ್ಯವಾಗಿದ್ದ ಲ್ಯಾಪ್ಟಾಪ್ ಅನ್ನು ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್ ಅವರು ಕೊಡುಗೆಯಾಗಿ ನೀಡಿದರು.
ನವರಾತ್ರಿಯ ಮಹಾನವಮಿಯ ಪುಣ್ಯ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಸೋಮಸುಂದರಂ ಅವರು ಪ್ರಿಯಾಂಕ ಅವರಿಗೆ ಲ್ಯಾಪ್ಟಾಪ್ ಹಸ್ತಾಂತರಿಸಿ, ಅವರ ಶೈಕ್ಷಣಿಕ ಸಾಧನೆ ಹಾಗೂ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಶ್ರೀ ಕಿಶೋರ್ ದಂಡಕೇರಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ (ರಿ.) ಉಡುಪಿ ಘಟಕದ ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್, ದಯಾನಂದ ಪೂಜಾರಿ ಹಾಗೂ ನಾರಾಯಣ ಬಿ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯ ಪ್ರತಿಭೆಯನ್ನು ಗುರುತಿಸಿ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ತಾಂತ್ರಿಕ ಸೌಲಭ್ಯವನ್ನು ಒದಗಿಸುವ ಮೂಲಕ ರಘುನಾಥ ಮಾಬಿಯಾನ್ ಅವರು ಶ್ಲಾಘನೀಯ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಇಂತಹ ಪ್ರೋತ್ಸಾಹದಾಯಕ ಕಾರ್ಯಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದರೊಂದಿಗೆ ಅವರ ಶೈಕ್ಷಣಿಕ ಪ್ರಗತಿಗೆ ಪ್ರೇರಣೆಯಾಗಲಿವೆ.







