ಕುಪ್ಪೆಪದವು–ಎಡಪದವು ನ 10 : ಭಾರತೀಯ ಸಂಸ್ಕೃತಿಯಲ್ಲಿ ಧಾನ್ಯಕ್ಕೆ ಅನ್ನದಾತನ ಸಂಕೇತವಾಗಿ ಹಾಗೂ ಗೋಮಾತೆಗೆ ಪವಿತ್ರ ಸ್ಥಾನವಿದೆ. ಇಂತಹ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಕುಪ್ಪೆಪದವು–ಎಡಪದವು ಘಟಕದ ವತಿಯಿಂದ ನವೆಂಬರ್ 10ರಂದು ಧಾನ್ಯಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷರಾದ ಸತೀಶ್ ಕೆ.ಎಂ. ಅವರ ಹೊಸಹೊಕ್ಳು ನಿವಾಸದಲ್ಲಿ ಭಕ್ತಿಭಾವದಿಂದ ನೆರವೇರಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಯುವವಾಹಿನಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸತೀಶ್ ಮತ್ತು ಪೂರ್ಣಿಮಾ ದಂಪತಿಗಳು ಮನೆಯವರೊಂದಿಗೆ ಆತ್ಮೀಯವಾಗಿ ಶಾಲು ಹೊದಿಸಿ ಸ್ವಾಗತಿಸಿ ಸತ್ಕರಿಸಿದರು. ಬಳಿಕ ಘಟಕದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಧಾನ್ಯಪೂಜೆ ಹಾಗೂ ಗೋಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪೂರ್ಣ ವ್ಯವಸ್ಥೆ ಹಾಗೂ ಆತಿಥ್ಯವನ್ನು ಒದಗಿಸಿದ ಸತೀಶ್ ಮತ್ತು ಪೂರ್ಣಿಮಾ ದಂಪತಿಗಳನ್ನು ಘಟಕದ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷರಾದ ಗೋಪಾಲ ಪೂಜಾರಿಯವರು, “ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಯುವವಾಹಿನಿ ಸಂಸ್ಥೆಯ ಘಟಕದ ವತಿಯಿಂದ ಆಯೋಜಿಸಲಾದ ಧಾನ್ಯಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮವು ಇಂದಿನ ಯುವಜನತೆಗೆ ಮತ್ತು ಸಮಾಜಕ್ಕೆ ಉತ್ತಮ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಅವಿಸ್ಮರಣೀಯ ಕ್ಷಣಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದ ನಾವೆಲ್ಲರೂ ಧನ್ಯರು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಅಜಯ್ ಆಮೀನ್, ಸತೀಶ್ ಕೆ.ಎಂ., ಜಗದೀಶ್ ದುರ್ಗಾಕೊಡಿ, ಸೌಮ್ಯ ಕೋಟ್ಯಾನ್, ಅಕ್ಷಿತ್ ಕುಮಾರ್, ಶ್ರೀಧರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಬೊಲಿಯ, ಹಿತೈಷಿ ಹಾಗೂ ಪ್ರಮ್ಯ ಫ್ಯಾಶನ್ ಮಾಲಕರಾದ ಪ್ರಕಾಶ್ ಕೆ. ಸೇರಿದಂತೆ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪೂರ್ಣಿಮಾ ಸತೀಶ್ ಹಾಗೂ ಮನೆಯವರ ವತಿಯಿಂದ ಎಲ್ಲರಿಗೂ ಉತ್ತಮ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಆತ್ಮೀಯವಾಗಿ ಉಪಾಹಾರ ಸವಿದರು. ಒಟ್ಟಿನಲ್ಲಿ ಸಂಪ್ರದಾಯ, ಭಕ್ತಿ, ಆತಿಥ್ಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮವು ಎಲ್ಲರ ಮನದಲ್ಲಿ ಅವಿಸ್ಮರಣೀಯ ನೆನಪಾಗಿ ಮೂಡಿಬಂತು. ಘಟಕದ ಜೊತೆ ಕಾರ್ಯದರ್ಶಿ ಕುಮಾರಿ ಧನ್ಯಶ್ರೀ ವಂದಿಸಿದರು.







