ಪಣಂಬೂರು–ಕುಳಾಯಿ ನ 08 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ನವೆಂಬರ್ 8ರಂದು ಘಟಕದ ಸಲಹೆಗಾರರಾದ ಸುಜಾತ ಕುಳಾಯಿ ಅವರ ಮನೆಯಲ್ಲಿ ತುಡರ್ ಪರ್ಬ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಘಟಕದ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಮನೆಯ ಮುಂಭಾಗದಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾವಳಿಯ ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸದಸ್ಯರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಸದಸ್ಯರು ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ವಿಶೇಷ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು ಸವಿಯುವ ಮೂಲಕ ಸಂತೋಷವನ್ನು ಸಂಭ್ರಮಿಸಿದರು. ನಂತರ ಸುಮಧುರ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮದ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸಿದರು
ಕಾರ್ಯಕ್ರಮದ ಸಂಚಾಲಕರಾದ ಮಂಜುಳಾ ಹಾಗೂ ಮಹಿಳಾ ಸದಸ್ಯರುಗಳ ಪೂರ್ವಸಿದ್ಧತೆ ಮತ್ತು ಸಂಘಟಿತ ಪ್ರಯತ್ನ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಈ ಸಂಭ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ತಮ್ಮ ಮನೆಯ ವಠಾರದಲ್ಲಿ ಸ್ಥಳಾವಕಾಶ ಕಲ್ಪಿಸಿ ಸಹಕರಿಸಿದ ಘಟಕದ ಸಲಹೆಗಾರರಾದ ಸುಜಾತ ಟೀಚರ್ ಅವರಿಗೆ ವಿಶೇಷ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಘಟಕದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.







