ಮೂಡುಬಿದಿರೆ ನ 07: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 7ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಐದನೇ ವರ್ಷದ *‘ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ’*ಯ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಮಂದಿರ ಸಭಾ (ರಿ.) ಅಧ್ಯಕ್ಷರೂ, ಮಾಜಿ ಸಚಿವರೂ ಆಗಿರುವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಸಮಾಜ ಮಂದಿರ ಸಭೆಯು ಸಮಾಜಮುಖಿ ಕಾರ್ಯಗಳ ಉದ್ದೇಶದಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುವ ಸಮಾಜಮುಖಿ ಚಟುವಟಿಕೆಗಳಾಗಿವೆ. ಸಮಾಜ ಮಂದಿರದೊಂದಿಗೆ ಕೈಜೋಡಿಸಿ ಇಂತಹ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವ ಯುವವಾಹಿನಿ ಮೂಡುಬಿದಿರೆ ಘಟಕದ ಕಾರ್ಯ ಅಭಿನಂದನಾರ್ಹ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ ಮಾತನಾಡಿ, ಸಮೃದ್ಧಿಯ ಬದುಕಿಗೆ ವಿಶ್ವಶಾಂತಿ ಅತ್ಯಗತ್ಯ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ದೇಶ ನಮ್ಮದು. ದೀಪಾವಳಿ ಹಬ್ಬವು ಸರ್ವರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದರು. ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಮಾತನಾಡಿ, ಸರ್ವಧರ್ಮೀಯರನ್ನು ಒಗ್ಗೂಡಿಸಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿರುವ ಸಮಾಜ ಮಂದಿರ ಸಭಾ ಹಾಗೂ ಯುವವಾಹಿನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರುನೈಝಿ ವರ್ಲ್ಡ್ ಮೂಡುಬಿದಿರೆಯ ವ್ಯವಸ್ಥಾಪಕ ನಿರ್ದೇಶಕ ಅಬೂಬಕರ್ ಸಿದ್ದಿಕ್ ಕಬಕ, ವೆಲ್‌ನೆಸ್ ಕೋಚ್ ಜಾನ್ ಡಿಸೋಜಾ ಹಾಗೂ ಪವರ್ ಫ್ರೆಂಡ್ಸ್ ಬೆದ್ರದ ಹರೀಶ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಂ.ಡಿ.ಬಿ. ಲೈವ್ 24 ಮಾಲಕ ರಾಘವೇಂದ್ರ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ಸಾವ್ಯ, ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಕಾರ್ಯದರ್ಶಿ ಮೇಫನಾ ಹಾಗೂ ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು ಉಪಸ್ಥಿತರಿದ್ದರು. ಹರ್ಷಾ ಯು. ಕೋಟ್ಯಾನ್ ಪ್ರಾರ್ಥಿಸಿದರು. ಗಣೇಶ್ ಕಾಮತ್ ಸ್ವಾಗತಿಸಿದರು. ಸುಶಾಂತ್ ಕರ್ಕೇರ ಮಾರೂರು ಸನ್ಮಾನಿತರನ್ನು ಪರಿಚಯಿಸಿದರು. ನವಾನಂದ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ದಯಾನಂದ ಮಾಸ್ತಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಎ. ಕೋಟ್ಯಾನ್ ವಂದಿಸಿದರು.
ದೀಪಾವಳಿಯ ಸಾಂಸ್ಕೃತಿಕ ವೈಭವದೊಂದಿಗೆ ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಸಾರಿದ ಐದನೇ ವರ್ಷದ ಬೆದ್ರ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.







