ವಿಶುಕುಮಾರ್ ಪ್ರಶಸ್ತಿ ಸಮಾರಂಭದ ವಿವಿಧ ಸ್ಪರ್ಧೆಗಳಲ್ಲಿ ಕೊಲ್ಯ ಘಟಕಕ್ಕೆ ಹಲವು ಪ್ರಶಸ್ತಿಗಳ ಗರಿ
ಕೊಲ್ಯ ನ 04 : ಸಾಧನೆಗೆ ಪ್ರೋತ್ಸಾಹ, ಪ್ರತಿಭೆಗೆ ಗೌರವ ನೀಡುವ ಮೂಲಕ ಯುವವಾಹಿನಿ ಕೊಲ್ಯ ಘಟಕವು ತನ್ನ ಸಾಧಕ ಸದಸ್ಯರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಕೊಲ್ಯ ಘಟಕದ ಸ್ಪರ್ಧಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿರುವುದು ಘಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕವನ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ರಶ್ಮಿ ಸನಿಲ್ ಸಾಧನೆ
ವಿಶು ಕಾವ್ಯಾಮೃತ (ಕವನ ಸ್ಪರ್ಧೆ) ಹಾಗೂ ವಿಶು ವಿಹಂಗಮ (ವಿಶುಕುಮಾರ್ ವಿರಚಿತ ಕೃತಿಗಳ ವಿಮರ್ಶೆ) ಸ್ಪರ್ಧೆಗಳಲ್ಲಿ ಭಾಗವಹಿಸಿದ ಘಟಕದ ಸದಸ್ಯೆ ಶ್ರೀಮತಿ ರಶ್ಮಿ ಸನಿಲ್ ಎರಡೂ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದು ಘಟಕದ ಗೌರವ ಹೆಚ್ಚಿಸಿದ್ದಾರೆ.
ರಸಪ್ರಶ್ನೆಯಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ ಸ್ಥಾನ
ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆಯಲ್ಲಿ ಘಟಕದ ಸದಸ್ಯರಾದ ಪ್ರಶಾಂತ್ ನೆಲ್ಲಿಸ್ತಳ ಅವರ ಪುತ್ರ ದಕ್ಷಿತ್ ಪೂಜಾರಿ, ಅವರ ಸ್ನೇಹಿತ ಪ್ರಯಾಗ್ ಹಾಗೂ ಘಟಕದ ಸದಸ್ಯೆ ಸತ್ಯ ಉದಯ್ ಅವರ ಪುತ್ರಿ ವರ್ಷಾ ಅವರನ್ನೊಳಗೊಂಡ ಮೂರು ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ.
ಸಾಮಾಜಿಕ ಪರಿಣಾಮ ಬೀರಿದ ಕಿರುಚಿತ್ರಕ್ಕೆ ಪ್ರಶಸ್ತಿ
ಸಿನಿದನಿ ಕಿರುಚಿತ್ರ ಸ್ಪರ್ಧೆಯಲ್ಲಿ ಕೊಲ್ಯ ಘಟಕದ ‘ಸಮ್ ಬಂಧ’ ಕಿರುಚಿತ್ರವು ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಕಿರುಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಕಿರುಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿದ್ದ ಘಟಕದ ಪ್ರಚಾರ ನಿರ್ದೇಶಕ ನಂದನ್ ಪೂಜಾರಿ ಅವರ ಸೃಜನಶೀಲತೆ ಹಾಗೂ ಪರಿಶ್ರಮವನ್ನು ಅಧ್ಯಕ್ಷರು ವಿಶೇಷವಾಗಿ ಪ್ರಶಂಸಿಸಿದರು.
ಸಮಾರಂಭದ ಯಶಸ್ಸಿಗೆ ಲತೀಶ್ ಸಂಕೋಳಿಗೆ ಅವರ ಕೊಡುಗೆ
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ವಿವಿಧ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ರೂಪಿಸಿ, ಸಮರ್ಥವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಘಟಕದ ಮಾಜಿ ಅಧ್ಯಕ್ಷ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸದಸ್ಯ ಲತೀಶ್ ಎಂ. ಸಂಕೋಳಿಗೆ ಅವರ ಪರಿಶ್ರಮ, ದೂರದೃಷ್ಟಿ ಹಾಗೂ ನಿಸ್ವಾರ್ಥ ಸೇವೆಯನ್ನು ಅಧ್ಯಕ್ಷರು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಎಲ್ಲಾ ಸಾಧಕರನ್ನು ನವೆಂಬರ್ 4ರಂದು ನಡೆದ ಘಟಕದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಶ್ಮಿ ಸನಿಲ್, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮೂವರು ವಿದ್ಯಾರ್ಥಿಗಳು, ಕಿರುಚಿತ್ರ ನಿರ್ದೇಶಕ ನಂದನ್ ಪೂಜಾರಿ ಹಾಗೂ ಮಾಜಿ ಅಧ್ಯಕ್ಷ ಲತೀಶ್ ಎಂ. ಸಂಕೋಳಿಗೆ ಅವರನ್ನು ಸನ್ಮಾನಿಸಿ, ಅವರ ಸಾಧನೆಗಳನ್ನು ಅಭಿನಂದಿಸಲಾಯಿತು. ಮುಂದೆಯೂ ಇದೇ ರೀತಿಯ ಸಾಧನೆಗಳನ್ನು ಮುಂದುವರಿಸುವಂತೆ ಹಾರೈಸಲಾಯಿತು.
ಹಾಜರಾತಿಯಲ್ಲೂ ಕೊಲ್ಯ ಘಟಕಕ್ಕೆ ಬಹುಮಾನ
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿ ಹೆಚ್ಚು ಸದಸ್ಯರ ಹಾಜರಾತಿ ದಾಖಲಿಸಿದ ಘಟಕವೆಂಬ ಹೆಗ್ಗಳಿಕೆಯೊಂದಿಗೆ ಕೊಲ್ಯ ಘಟಕ ಬಹುಮಾನವನ್ನೂ ಪಡೆದುಕೊಂಡಿತ್ತು. ಇದಕ್ಕಾಗಿ ವಿಶೇಷ ಶ್ರಮ ವಹಿಸಿದ ಪ್ರಥಮ ಹಾಗೂ ದ್ವಿತೀಯ ಉಪಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿ, ಅಭಿನಂದನೆಯ ಸಂಕೇತವಾಗಿ ಹೂವಿನ ಗಿಡಗಳನ್ನು ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಸಾಧಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಜೀವನ್ ಕೊಲ್ಯ, ನಿಕಟಪೂರ್ವ ಅಧ್ಯಕ್ಷ ನಿತಿನ್ ಕರ್ಕೇರ, ಕಾರ್ಯದರ್ಶಿ ಮುಕೇಶ್ ಕಿನ್ಯ, ಪ್ರಥಮ ಉಪಾಧ್ಯಕ್ಷ ಜೀವನ್ ಬೆರಿಕೆ, ದ್ವಿತೀಯ ಉಪಾಧ್ಯಕ್ಷ ಲತೀಶ್ ಪಾಪುದಡಿ, ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್, ಕೇಂದ್ರ ಸಮಿತಿ ಆಂತರಿಕ ಲೆಕ್ಕ ಪರಿಶೋಧಕ ಸುಂದರ್ ಸುವರ್ಣ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.







