ಉಳಿತಾಯದ ಹವ್ಯಾಸ ಭವಿಷ್ಯದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ – ಶಾಸಕ ಡಿ. ವೇದವ್ಯಾಸ ಕಾಮತ್
ಮಂಗಳೂರು ಅ 25 : ಭಾರತೀಯ ಅಂಚೆ ಇಲಾಖೆಯು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಹಲವು ಜನಪರ ಸೇವೆಗಳನ್ನು ಒದಗಿಸುತ್ತಿದ್ದು, ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಅಂಚೆ ಇಲಾಖೆಯ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಅವರು ಅಕ್ಟೋಬರ್ 25ರಂದು ಯುವವಾಹಿನಿ (ರಿ.) ಶಕ್ತಿನಗರ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಕುಂಟಲ್ಪಾಡಿ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾದ ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಉಚಿತ ಆಧಾರ್ ತಿದ್ದುಪಡಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಅಂಚೆ ಇಲಾಖೆಯು ಕೇವಲ ಪತ್ರಗಳ ವಿತರಣೆಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕಿಗೆ ಅಗತ್ಯವಾದ ಹಲವು ಸೇವೆಗಳನ್ನು ಒದಗಿಸುತ್ತಿದೆ. ಇಂತಹ ಅಭಿಯಾನಗಳ ಸದುಪಯೋಗವನ್ನು ಯುವವಾಹಿನಿಯ ಮೂಲಕ ಪ್ರತಿಯೊಬ್ಬ ಸಾರ್ವಜನಿಕರೂ ಪಡೆದುಕೊಳ್ಳಬೇಕು. ಇಂದು ಮಾಡುವ ಸಣ್ಣ ಉಳಿತಾಯವು ನಾಳೆ ಕುಟುಂಬದ ಸಂಕಷ್ಟದ ಸಮಯದಲ್ಲಿ ದೊಡ್ಡ ಆಸರೆಯಾಗಬಲ್ಲದು ಎಂದು ಅವರು ತಿಳಿಸಿದರು.
ಉಪ ಅಂಚೆ ಅಧೀಕ್ಷಕ ಕೃಷ್ಣ ವಿಠಲ್ ಭಟ್ ಮಾತನಾಡಿ, ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಸುರಕ್ಷಿತ ಉಳಿತಾಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಪ್ರತಿಯೊಬ್ಬರಲ್ಲೂ ಉಳಿತಾಯದ ಮನೋಭಾವ ಬೆಳೆಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷ ದಯಾನಂದ ಕತ್ತಲ್‌ಸಾಲ್ ಅವರು ಅಂಚೆ ಇಲಾಖೆಯ ವಿವಿಧ ಯೋಜನೆಗಳು, ಅವುಗಳ ಪ್ರಯೋಜನಗಳು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬಹುದಾದ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ನಿಕಟಪೂರ್ವ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಜೀವನ ವಿಮೆ ಹಾಗೂ ಆರೋಗ್ಯ ವಿಮೆಯನ್ನು ಹೊಂದುವ ಮೂಲಕ ತನ್ನ ಕುಟುಂಬದ ಭವಿಷ್ಯಕ್ಕೆ ಭದ್ರತೆ ಒದಗಿಸಿಕೊಳ್ಳಬೇಕು ಎಂದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿಯಲ್ಲಿ ವಿಮೆಯು ಕೇವಲ ಉಳಿತಾಯದ ಮಾರ್ಗವಲ್ಲ, ಅದು ಕುಟುಂಬದ ಆರ್ಥಿಕ ಭದ್ರತೆಗೆ ಅತ್ಯಗತ್ಯವಾದ ಸುರಕ್ಷಾ ಕವಚವಾಗಿದೆ. ಪ್ರತಿಯೊಬ್ಬರೂ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ವಯಸ್ಸಿನಲ್ಲಿಯೇ ವಿಮೆ ಮಾಡಿಸಿಕೊಳ್ಳುವುದು ವಿವೇಕಯುತ ನಡೆ ಎಂದು ಹೇಳಿದರು.
ತುಳುವರೇ ಕೂಟದ ಉಪಾಧ್ಯಕ್ಷ ಉದಯ್ ಶಕ್ತಿನಗರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಕುಂಟಲ್ಪಾಡಿಯ ಅಧ್ಯಕ್ಷ ತುಕಾರಾಮ್ ಪೂಜಾರಿ ಶುಭ ಹಾರೈಸಿ, ಇಂತಹ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ವಿಮಾ ನೋಂದಣಿಗಳು ಹಾಗೂ 75ಕ್ಕೂ ಹೆಚ್ಚು ಆಧಾರ್ ತಿದ್ದುಪಡಿ ನೋಂದಣಿಗಳು ನಡೆದಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಯುವವಾಹಿನಿ (ರಿ.) ಶಕ್ತಿನಗರ ಘಟಕದ ಅಧ್ಯಕ್ಷ ತೇಜಸ್ ವಿ. ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಿಭಾ ಶಶಿರಾಜ್ ವಂದಿಸಿದರು. ನಮ್ಮ ಕುಡ್ಲ ವಾಹಿನಿಯ ಜನಧ್ವನಿ ಕಾರ್ಯಕ್ರಮದ ನಿರೂಪಕ ಶಿವಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು.







