ಬಜಪೆ ಅ 15 : ಸೇವೆ, ಶಿಸ್ತು ಹಾಗೂ ಸಂಘಟನಾ ಬದ್ಧತೆಯನ್ನು ಮೈಗೂಡಿಸಿಕೊಂಡಿರುವ ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರು ಮಂಗಳೂರು ದಸರಾ–2026ರ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಸ್ವಯಂಸೇವೆ ಸಲ್ಲಿಸಿ, ಅನ್ನದಾನ ಸೇವೆಗೆ ದೇಣಿಗೆ ಸಮರ್ಪಿಸಿದರು.

ಕುದ್ರೋಳಿ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ವಿಜೃಂಭಣೆಯಿಂದ ನಡೆದ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 15ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಯುವವಾಹಿನಿ ಬಜಪೆ ಘಟಕದ ಸದಸ್ಯರು ವಿವಿಧ ಸೇವಾ ಕಾರ್ಯಗಳಲ್ಲಿ ಶಿಸ್ತುಬದ್ಧವಾಗಿ ಹಾಗೂ ಉತ್ಸಾಹದಿಂದ ಪಾಲ್ಗೊಂಡರು.
ಬೆಳಿಗ್ಗೆಯಿಂದ ಸಂಜೆವರೆಗೆ ಕೌಂಟರ್ ಸೇವೆ, ಲಡ್ಡು ಪ್ರಸಾದ ಪ್ಯಾಕಿಂಗ್, ಮಕ್ಕಳ ದಸರಾ ನೋಂದಣಿ ಕೌಂಟರ್ ಹಾಗೂ ಅನ್ನಪ್ರಸಾದ ವಿತರಣೆಯಂತಹ ವಿವಿಧ ಜವಾಬ್ದಾರಿಗಳನ್ನು ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸೇವಾ ಕಾರ್ಯದ ಜೊತೆಗೆ ಅನ್ನದಾನ ಸೇವೆಗೆ ದೇಣಿಗೆ ಸಮರ್ಪಿಸುವ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯನ್ನು ಮೆರೆದರು.
ಸದಸ್ಯರ ಶಿಸ್ತುಬದ್ಧ ಸೇವೆ ಹಾಗೂ ಸಹಕಾರವನ್ನು ಗುರುತಿಸಿ, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ವತಿಯಿಂದ ಶ್ರೀ ಶಾರದಾ ಮಾತೆಯ ಸನ್ನಿಧಿಯಲ್ಲಿ ಅನುಗ್ರಹ ಪತ್ರವನ್ನು ನೀಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ಅನುಗ್ರಹ ಪತ್ರವನ್ನು ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರಿಗೆ ಹಸ್ತಾಂತರಿಸಿದರು.
ಸೇವಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರು ಶ್ರೀ ಶಾರದಾ ಮಾತೆಯ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ದಸರಾ ಮಹೋತ್ಸವದ ಸಂದರ್ಭದಲ್ಲಿ ಸೇವೆಯ ಮೂಲಕ ಭಕ್ತರಿಗೆ ನೆರವಾದ ಯುವವಾಹಿನಿ ಬಜಪೆ ಘಟಕದ ಕಾರ್ಯವು ಶಿಸ್ತು, ಒಗ್ಗಟ್ಟು ಹಾಗೂ ಸೇವಾ ಮನೋಭಾವಕ್ಕೆ ಮಾದರಿಯಾಯಿತು.







