102 ಯೂನಿಟ್ ರಕ್ತ ಸಂಗ್ರಹ | 150ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ | 62 ಮಂದಿಗೆ ಉಚಿತ ಕನ್ನಡಕ | 20 ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ
ಬೆಳ್ತಂಗಡಿ ಅ 25 : ರಕ್ತದಾನ, ಆರೋಗ್ಯ ತಪಾಸಣೆ ಹಾಗೂ ಅಗತ್ಯವಿರುವವರಿಗೆ ವೈದ್ಯಕೀಯ ನೆರವು ಒದಗಿಸುವ ಮೂಲಕ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ ಶಿಬಿರವು ಅಕ್ಟೋಬರ್ 25ರಂದು ಗುರುವಾಯನಕೆರೆಯ N.E.T. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಜೈನ್ ಪೇಟೆ, ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್, ಮಂಗಳೂರು ಹಾಗೂ ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ, N.E.T. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸಹಕಾರದೊಂದಿಗೆ ಆಯೋಜಿಸಲಾದ ಶಿಬಿರದಲ್ಲಿ ರಕ್ತದಾನ, ವೈದ್ಯಕೀಯ ಮತ್ತು ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ, ಗಾಲಿಕುರ್ಚಿ ಹಾಗೂ ವಾಟರ್ ಬೆಡ್ ವಿತರಣೆ ಸೇರಿದಂತೆ ವಿವಿಧ ಜನೋಪಯೋಗಿ ಸೇವೆಗಳು ಜರುಗಿದವು. ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾದ ಉಪಾಧ್ಯಕ್ಷ ಗಿರೀಶ್ ಪೂಜಾರಿ ಮೂಡುಕೋಡಿ, ಬೆಳ್ತಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಬೆಳ್ತಂಗಡಿ ಗುರುದೇವ ಬ್ಯಾಂಕಿನ ಅಧ್ಯಕ್ಷ ಭಗೀರಥ್ ಜಿ., ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಹರಿದಾಸ್ ಎಸ್.ಎಂ., N.E.T. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಸಜಿ ಪಿ.ಆರ್., ಕ್ರಾಂತಿವೀರ ಮಂಜ ಬೈದ್ಯ ಸಂಸ್ಕರಣ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಖ್ಯಾತ ಜ್ಯೋತಿಷಿ ಹಾಗೂ ಕಂಬಳ ಯಜಮಾನ ಗಣೇಶ್ ನಾರಾಯಣ ಪಂಡಿತ್ ವೇಣೂರು ಮೂಡುಕೋಡಿ, ಕೊಕ್ರಾಡಿ ಮಣಿಕಂಠ ಟ್ರೇಡರ್ಸ್ ಮಾಲೀಕ ಶುಭಕರ ಪೂಜಾರಿ ಸಾವ್ಯ ಹಾಗೂ ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ರಕ್ಷಿತ್ ಶಿವರಾಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಘಟಕದ ನಿರ್ದೇಶಕ ಶೈಲೇಶ್ ಪ್ರಾರ್ಥಿಸಿದರು. ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕ ರಾಕೇಶ್ ಕುಮಾರ್ ಮೂಡುಕೋಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶಿಬಿರದ ಸಂಚಾಲಕ ಗುರುರಾಜ್ ಗುರಿಪಳ್ಳ ಸನ್ಮಾನ ಪತ್ರ ವಾಚಿಸಿದರು. ಸುಧಾಮಣಿ ರಮಾನಂದ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ವಂದಿಸಿದರು.
102 ಯೂನಿಟ್ ರಕ್ತ ಸಂಗ್ರಹ : ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನದ ಮಹತ್ವವನ್ನು ಅರಿತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದರು.
ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿರುವ 62 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಅಲ್ಲದೆ, 20 ಮಂದಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಲಾಯಿತು. ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ ಹಾಗೂ ವಾಟರ್ ಬೆಡ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ ABHA ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು.
ಸೇವೆ, ಸಹಕಾರ ಮತ್ತು ಮಾನವೀಯತೆಯ ಸಂಗಮ : ಶಿಬಿರದ ಯಶಸ್ಸಿಗೆ ಸಹಕರಿಸಿದ ದಾನಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ, ರಕ್ತದಾನಿಗಳು, ಫಲಾನುಭವಿಗಳು, ಸ್ವಯಂಸೇವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಯುವವಾಹಿನಿಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕೇಂದ್ರ ಸಮಿತಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಒಬ್ಬರ ರಕ್ತ ಮತ್ತೊಬ್ಬರ ಜೀವ ಉಳಿಸಬಹುದು; ಒಂದು ನೆರವಿನ ಹಸ್ತ ಮತ್ತೊಂದು ಕುಟುಂಬದ ಬದುಕಿಗೆ ಆಸರೆಯಾಗಬಹುದು ಎಂಬ ಮಾನವೀಯ ಸಂದೇಶವನ್ನು ಸಾರಿದ ಈ ಶಿಬಿರವು ಸೇವೆ, ಸಹಕಾರ ಹಾಗೂ ಸಾಮಾಜಿಕ ಬದ್ಧತೆಯ ಮಹತ್ವವನ್ನು ಎತ್ತಿಹಿಡಿಯಿತು. ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಯುವವಾಹಿನಿಯ ಸೇವಾ ಚಟುವಟಿಕೆಗಳಿಗೆ ಈ ಕಾರ್ಯಕ್ರಮ ಮತ್ತೊಂದು ಅರ್ಥಪೂರ್ಣ ಸೇರ್ಪಡೆಯಾಯಿತು.







