ಉಡುಪಿ ಅ 20 : ಯುವವಾಹಿನಿ (ರಿ.) ಉಡುಪಿ ಘಟಕವು ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 20ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸ್ವಯಂಸೇವೆ, ಕಲಾಸೇವೆ ಹಾಗೂ ಶೈಕ್ಷಣಿಕ ನೆರವಿನ ಮೂಲಕ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸಿತು.

ಬೆಳಿಗ್ಗೆ 8.30ರಿಂದ ಆರಂಭಗೊಂಡ ಸ್ವಯಂಸೇವಾ ಕಾರ್ಯದಲ್ಲಿ ಘಟಕದ 65ಕ್ಕೂ ಅಧಿಕ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು, ಕ್ಷೇತ್ರದಲ್ಲಿ ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕ್ಷೇತ್ರದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಘಟಕದ ವತಿಯಿಂದ ₹15,000 ದೇಣಿಗೆಯನ್ನು ಸಮರ್ಪಿಸಲಾಯಿತು.
‘ಮಾಣಿ ಬಾಲೆ ಮಾಯಾಂದಲ್’ ನೃತ್ಯರೂಪಕ ಪ್ರದರ್ಶನ : ಅಂದು ಸಂಜೆ 7 ಗಂಟೆಗೆ ಯುವವಾಹಿನಿ ಉಡುಪಿ ಘಟಕದ ಸದಸ್ಯರಿಂದ ಭಕ್ತಿಪ್ರಧಾನ ನೃತ್ಯರೂಪಕ ‘ಮಾಣಿ ಬಾಲೆ ಮಾಯಾಂದಲ್’ ಪ್ರದರ್ಶನಗೊಂಡಿತು. ಮಹೇಶ್ ಮಲ್ಪೆ ಅವರ ರಚನೆ, ಸಂದೇಶ್ ಕಟಪಾಡಿ ಅವರ ನಿರ್ದೇಶನ ಹಾಗೂ ಸುಪ್ರೀತ್ ಅವರ ರಂಗವಿನ್ಯಾಸದಲ್ಲಿ ಮೂಡಿಬಂದ ಈ ನೃತ್ಯರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಮೂಲಕ ಘಟಕವು ಧಾರ್ಮಿಕ ಸೇವೆಯೊಂದಿಗೆ ಕಲಾಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿತು.

ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರಿಯಾಂಕ ಅವರಿಗೆ ₹55,000 ಮೌಲ್ಯದ ಲ್ಯಾಪ್‌ಟಾಪ್ ನೆರವು : ಯುವವಾಹಿನಿಯ ‘ವಿದ್ಯೆ, ಉದ್ಯೋಗ, ಸಂಪರ್ಕ’ ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಪ್ರಿಯಾಂಕ ಅವರಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸುಮಾರು ₹55,000 ಮೌಲ್ಯದ ಲ್ಯಾಪ್‌ಟಾಪ್ ಒದಗಿಸಲಾಯಿತು. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಬಜಿರಡ್ಕ ಗ್ರಾಮದವರಾದ ಪ್ರಿಯಾಂಕ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ವ್ಯಾಸಂಗ ಮಾಡುತ್ತಿದ್ದು, ಶೇಕಡಾ 93 ಅಂಕ ಗಳಿಸಿರುವುದು ಗಮನಾರ್ಹ ಸಾಧನೆಯಾಗಿದೆ.
ಯುವವಾಹಿನಿ (ರಿ.) ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್ ಅವರು ವಿದ್ಯಾರ್ಥಿನಿಯ ಶೈಕ್ಷಣಿಕ ಅಗತ್ಯವನ್ನು ಮನಗಂಡು ಲ್ಯಾಪ್‌ಟಾಪ್ ಒದಗಿಸಿದರು. ನವರಾತ್ರಿಯ ಮಹಾನವಮಿಯ ಪುಣ್ಯ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಸೋಮಸುಂದರಂ ಅವರು ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಹಸ್ತಾಂತರಿಸಿ, ಮುಂದಿನ ಶೈಕ್ಷಣಿಕ ಬದುಕಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಸಂತೋಷ ಜೆ. ಪೂಜಾರಿ, ಕಿಶೋರ್ ದಂಡಕೇರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಎನ್. ಅಶೋಕ್ ಕುಮಾರ್ ಪಡ್ಪು ಹಾಗೂ ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್, ದಯಾನಂದ ಪೂಜಾರಿ ಮತ್ತು ನಾರಾಯಣ ಬಿ.ಎಸ್. ಉಪಸ್ಥಿತರಿದ್ದರು.
ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ : ಇದೇ ಸಂದರ್ಭದಲ್ಲಿ ಯುವವಾಹಿನಿ ಉಡುಪಿ ಘಟಕದ ಮಾಜಿ ಅಧ್ಯಕ್ಷರು, ಕೇಂದ್ರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ವಿಶು ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ಸೇವೆಯಲ್ಲಿ ತೊಡಗಿಸಿಕೊಂಡು, ಕಲೆಯ ಮೂಲಕ ಭಕ್ತಿಭಾವವನ್ನು ಪಸರಿಸಿ, ಪ್ರತಿಭಾನ್ವಿತ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಯುವವಾಹಿನಿ (ರಿ.) ಉಡುಪಿ ಘಟಕವು ಸೇವೆ, ಸಂಸ್ಕೃತಿ ಮತ್ತು ಶಿಕ್ಷಣದ ಸಮನ್ವಯಕ್ಕೆ ಸಾಕ್ಷಿಯಾಯಿತು. ಘಟಕದ ಸದಸ್ಯರು ಕ್ಷೇತ್ರದಲ್ಲಿ ದೇವರ ಅನುಗ್ರಹ ಪ್ರಸಾದ ಸ್ವೀಕರಿಸಿ ಧನ್ಯರಾದರು.







