ಕಡಬ, ಅ. 18: ಪಾಲ್ತಿಮಾರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಭಜನಾ ತಂಡದಿಂದ ಭಾನುವಾರ ರಾತ್ರಿ ಭಜನಾ ಸೇವೆ ಭಕ್ತಿಭಾವದಿಂದ ನೆರವೇರಿತು.

ರಾತ್ರಿ 7.30ರಿಂದ 9 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಸುಮಧುರ ಭಜನೆಗಳನ್ನು ಹಾಡುವ ಮೂಲಕ ಶ್ರೀ ದೇವಿಯ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು. ಭಜನಾ ಸಂಕೀರ್ತನೆಯು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿ ನವರಾತ್ರಿ ಉತ್ಸವದ ಸಂಭ್ರಮಕ್ಕೆ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ ಜಯಪ್ರಕಾಶ್ ದೋಳ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್. ಎಸ್. ಕಡಬ, ಕಾರ್ಯದರ್ಶಿ ಸತೀಶ್ ಬಳ್ಪ ಸೇರಿದಂತೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಜನಾ ಸೇವೆಯಲ್ಲಿ ಪಾಲ್ಗೊಂಡ ಎಲ್ಲಾ ಭಜಕರಿಗೆ ಕ್ಷೇತ್ರದ ಅರ್ಚಕರು ಕೃತಜ್ಞತೆ ಸಲ್ಲಿಸಿ, ಪೂಜಾ ಪ್ರಸಾದ ನೀಡಿ ಗೌರವಿಸಿದರು.







