ಕೊಲ್ಯ, ಅ. 16: ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಶುಕ್ರವಾರ ನೆತ್ತಿಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಹಾಗೂ ಅನ್ನದಾನ ಸೇವೆ ಭಕ್ತಿಭಾವದಿಂದ ನೆರವೇರಿತು.

ಸಂಜೆ ನಡೆದ ಭಜನಾ ಸೇವೆಯಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ಶ್ರೀ ದೇವಿಯ ಕೀರ್ತನೆಗಳನ್ನು ಹಾಡಿದರು. ಬಳಿಕ ನಡೆದ ಮಹಾಪೂಜೆ ಹಾಗೂ ಮಹಾಮಂಗಳಾರತಿಯಲ್ಲಿ ಸರ್ವರೂ ಭಕ್ತಿಯಿಂದ ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕರು ಯುವವಾಹಿನಿ ಘಟಕದ ಸರ್ವ ಸದಸ್ಯರ ಪರವಾಗಿ ಪ್ರಾರ್ಥಿಸಿ ಘಟಕದ ಅಧ್ಯಕ್ಷರಿಗೆ ಪ್ರಸಾದ ನೀಡಿದರು.
ಇದೇ ಸಂದರ್ಭದಲ್ಲಿ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ನಡೆಯಲಿರುವ ಕಿರುಚಿತ್ರ ಸ್ಪರ್ಧೆಯಲ್ಲಿ ಯುವವಾಹಿನಿ ಕೊಲ್ಯ ಘಟಕದ ವತಿಯಿಂದ ಭಾಗವಹಿಸಲಿರುವ ಕಿರುಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಅನ್ನದಾನ ಸೇವೆಗೆ ಘಟಕದ ವತಿಯಿಂದ ₹10,000 ದೇಣಿಗೆ ಸಮರ್ಪಿಸಲಾಯಿತು. ಬಳಿಕ ಸರ್ವ ಸದಸ್ಯರು ಅನ್ನಪ್ರಸಾದ ಸ್ವೀಕರಿಸಿ, ಶಕ್ತಿ ಸ್ವರೂಪಿಣಿ ಶ್ರೀ ದೇವಿಗೆ ಭಕ್ತಿಪೂರ್ವಕವಾಗಿ ನಮಿಸಿ ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಜೀವನ್ ಕೊಲ್ಯ, ಪ್ರಥಮ ಉಪಾಧ್ಯಕ್ಷ ಜೀವನ್ ಬೆರಿಕೆ, ದ್ವಿತೀಯ ಉಪಾಧ್ಯಕ್ಷ ಲತೀಶ್ ಪಾಪುದಡಿ, ನಿಕಟಪೂರ್ವ ಅಧ್ಯಕ್ಷ ನಿತಿನ್ ಕರ್ಕೇರ, ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.







