ಬಜಪೆ, ಅ. 14: ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನೆರವೇರಿತು.

ಶಕ್ತಿ ಸ್ವರೂಪಿಣಿಯಾದ ಶ್ರೀ ದೇವಿಯನ್ನು ಆರಾಧಿಸುವ ನವರಾತ್ರಿಯ ನಾಲ್ಕನೇ ದಿನವಾದ ಬುಧವಾರ, ಅಕ್ಟೋಬರ್ 14ರಂದು ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಯುವವಾಹಿನಿ ಬಜಪೆ ಘಟಕದ ಸದಸ್ಯರು ಶ್ರೀ ದೇವಿಯ ನಾಮಸ್ಮರಣೆ ಹಾಗೂ ಭಜನೆಗಳನ್ನು ಭಕ್ತಿಯಿಂದ ಹಾಡಿ, ಕ್ಷೇತ್ರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದರು.
ಭಜನಾ ಕಾರ್ಯಕ್ರಮದ ಬಳಿಕ ಮಾತನಾಡಿದ ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ನಾರಾಯಣ ಪೂಜಾರಿ ಅವರು, “ನಾವು ಸದಾ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬಹುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ, ಭಜನಾ ಸಂಚಾಲಕಿ ದಿವ್ಯ ಸುನಿಲ್, ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಎಲ್ಲರೂ ಶ್ರೀ ದೇವರ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.







