ಕೊಲ್ಯ, ಅ. 14: ರಾಸಾಯನಿಕ ಪದಾರ್ಥಗಳ ಬಳಕೆಯ ಆತಂಕದ ನಡುವೆ ಆರೋಗ್ಯಕರ ಆಹಾರ ಸೇವನೆ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಸದಸ್ಯರಿಗಾಗಿ ‘ನಮ್ಮ ಕೈತೋಟ, ನಮ್ಮ ಆಹಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಅಕ್ಟೋಬರ್ 14ರಂದು ಕೊಲ್ಯದಲ್ಲಿ ಆಯೋಜಿಸಲಾಯಿತು.

ಮನೆಯ ಕೈತೋಟದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಸಿ, ಅವುಗಳನ್ನು ಆಹಾರವಾಗಿ ಬಳಸುವ ಮೂಲಕ ಆರೋಗ್ಯ ಕಾಪಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಉಳ್ಳಾಲ ವಲಯದ ಶಾಲೆಯಲ್ಲಿ ಕೈತೋಟ ನಿರ್ಮಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ವೇದಾವತಿ ಟೀಚರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕೈತೋಟ ನಿರ್ಮಾಣದ ವಿವಿಧ ವಿಧಾನಗಳ ಕುರಿತು ಮಾಹಿತಿ ನೀಡಿದರು. ಟೆರೇಸ್ ಕೈತೋಟದ ನಿರ್ವಹಣೆ, ತರಕಾರಿ ಬೀಜಗಳ ಆಯ್ಕೆ, ಬೀಜಾಂಕುರ ವಿಧಾನ, ಸಾವಯವ ಗೊಬ್ಬರ ತಯಾರಿಕೆ, ಕೈತೋಟದ ರಕ್ಷಣೆ ಹಾಗೂ ಮನೆಯಲ್ಲೇ ಬೆಳೆದ ತರಕಾರಿಗಳ ಮಹತ್ವವನ್ನು ವಿವರಿಸಿದರು.
“ನಾವು ಬೆಳೆಸುವ ಕೈತೋಟವನ್ನು ಪ್ರೀತಿಯಿಂದ ಕಾಪಾಡಿಕೊಳ್ಳಬೇಕು. ನಮ್ಮ ಕೈಯಾರೆ ಬೆಳೆದ ತರಕಾರಿಗಳನ್ನು ನೋಡುವುದೇ ಮನಸ್ಸಿಗೆ ಸಂತೋಷ ನೀಡುತ್ತದೆ. ಮಕ್ಕಳಲ್ಲಿಯೂ ಕೈತೋಟದ ಬಗ್ಗೆ ಆಸಕ್ತಿ ಬೆಳೆಸಬೇಕು. ಇದರಿಂದ ಆರೋಗ್ಯದ ರಕ್ಷಣೆಯ ಜೊತೆಗೆ ಕೃಷಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ,” ಎಂದು ವೇದಾವತಿ ಟೀಚರ್ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಘಟಕದ ವತಿಯಿಂದ ಸದಸ್ಯರಿಗೆ ಬೆಂಡೆಕಾಯಿ, ಹರಿವೆ ಸೊಪ್ಪು, ಬದನೆಕಾಯಿ, ಹೀರೆಕಾಯಿ, ಕುಂಬಳಕಾಯಿ, ತೊಂಡೆಕಾಯಿ ಸೇರಿದಂತೆ ವಿವಿಧ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಿ, ಮನೆಗಳಲ್ಲಿ ಕೈತೋಟ ನಿರ್ಮಿಸಲು ಪ್ರೋತ್ಸಾಹ ನೀಡಲಾಯಿತು.
ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ‘ನಮ್ಮ ಕೈತೋಟ, ನಮ್ಮ ಆಹಾರ’ ಯೋಜನೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಹಾಗೂ ಘಟಕದ ಮಾಜಿ ಅಧ್ಯಕ್ಷೆ ಸುಧಾ ಸುರೇಶ್, ಕೇಂದ್ರ ಸಮಿತಿಯ ಲೆಕ್ಕಪರಿಶೋಧಕ ಹಾಗೂ ಘಟಕದ ಮಾಜಿ ಅಧ್ಯಕ್ಷ ಸುಂದರ್ ಸುವರ್ಣ, ಕೇಂದ್ರ ಸಮಿತಿಯ ‘ಯುವಸಿಂಚನ’ ಸಂಪಾದಕ ಮಂಡಳಿ ಸದಸ್ಯ ಹಾಗೂ ಘಟಕದ ಮಾಜಿ ಅಧ್ಯಕ್ಷ ಲತೀಶ್ ಸಂಕೊಳಿಗೆ, ಸ್ಥಾಪಕ ಅಧ್ಯಕ್ಷ ಸುರೇಶ್ ಬಿಲ್ಲವ, ಮಾಜಿ ಅಧ್ಯಕ್ಷ ಮೋಹನ್ ಮಾಡೂರು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಘಟಕದ ಪ್ರಥಮ ಉಪಾಧ್ಯಕ್ಷ ಜೀವನ್ ಬೆರಿಕೆ ವಂದಿಸಿದರು. ಕಾರ್ಯಕ್ರಮದ ಭಾಗವಾಗಿ ಘಟಕದ 20 ಸದಸ್ಯರು ತಮ್ಮ ಮನೆಗಳಲ್ಲಿ ತರಕಾರಿ ಕೈತೋಟ ಬೆಳೆಸುವ ಸಂಕಲ್ಪ ಕೈಗೊಂಡರು. ಮನೆಯಂಗಳದಲ್ಲಿ ಕೈತೋಟ, ಮನೆಮಂದಿಗೆ ಆರೋಗ್ಯ – ‘ನಮ್ಮ ಕೈತೋಟ, ನಮ್ಮ ಆಹಾರ’ ಅಭಿಯಾನದ ಆಶಯ.







