ಮಂಗಳೂರು, ಅ. 21: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಡೆದ ಮಂಗಳೂರು ದಸರಾ ಮಹೋತ್ಸವದ ಅನ್ನದಾನ ಸೇವೆಗಾಗಿ ಯುವವಾಹಿನಿ ಸಂಸ್ಥೆಯ ವತಿಯಿಂದ ₹5,00,000 (ಐದು ಲಕ್ಷ ರೂಪಾಯಿ) ದೇಣಿಗೆಯನ್ನು ಸಮರ್ಪಿಸಲಾಯಿತು.

ಯುವವಾಹಿನಿ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅನ್ನದಾನ ಸೇವೆಗಾಗಿ ಇಷ್ಟೊಂದು ಬೃಹತ್ ಮೊತ್ತದ ದೇಣಿಗೆಯನ್ನು ಸಂಗ್ರಹಿಸಿ ಸಮರ್ಪಿಸಿರುವುದು ವಿಶೇಷವಾಗಿದೆ. ಸಂಸ್ಥೆಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು-ಕುಳಾಯಿ, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರಿ, ಕಟಪಾಡಿ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಉಡುಪಿ, ಮುಲ್ಕಿ, ಯಡ್ತಾಡಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡುಬಿದಿರೆ, ಕೆಂಜಾರು-ಕರಂಬಾರು, ಶಕ್ತಿನಗರ, ಕಾಪು, ಕುಪ್ಪೆಪದವು-ಎಡಪದವು, ಕಡಬ, ಬೆಂಗಳೂರು, ಕಾರ್ಕಳ, ವಿಟ್ಲ, ಗ್ರಾಮಚಾವಡಿ-ಕೊಣಾಜೆ ಹಾಗೂ ಪೆರ್ಮಂಕಿ ಒಟ್ಟು 35 ಘಟಕಗಳ ಸಹಸ್ರಾರು ಸದಸ್ಯರು ಈ ಮಹತ್ಕಾರ್ಯಕ್ಕೆ ಒಗ್ಗಟ್ಟಿನಿಂದ ಕೈಜೋಡಿಸಿ ಸಹಕರಿಸಿದ್ದಾರೆ.
ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಯುವವಾಹಿನಿ ಸಂಸ್ಥೆಯ ಸದಸ್ಯರು ಪ್ರತಿದಿನ ಬೆಳಗ್ಗಿನಿಂದ ರಾತ್ರಿವರೆಗೂ ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ಅನ್ನದಾನ ಸೇವೆಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಶ್ರಮದಾನದ ಮೂಲಕವೂ ದಸರಾ ಮಹೋತ್ಸವದ ಯಶಸ್ಸಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ, ಶ್ರೀ ಬಿ. ಜನಾರ್ದನ ಪೂಜಾರಿಯವರು, ತಾಯಿ ಶಾರದೆಯ ಸನ್ನಿಧಿಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಿದರು. ಯುವವಾಹಿನಿ ಸಂಸ್ಥೆಯ ಸೇವಾ ಕಾರ್ಯವನ್ನು ಗುರುತಿಸಿ ಅಭಿನಂದಿಸಿರುವುದು ಸಂಸ್ಥೆಯ ಎಲ್ಲ ಸದಸ್ಯರಿಗೂ ಹೆಮ್ಮೆ ಮತ್ತು ಸಂತೋಷವನ್ನುಂಟುಮಾಡಿದೆ. ಇದು ಸಂಸ್ಥೆಯ ಸಂಘಟನಾತ್ಮಕ ಒಗ್ಗಟ್ಟು, ಸೇವಾ ಬದ್ಧತೆ ಹಾಗೂ ಸಮಾಜಮುಖಿ ಚಿಂತನೆಗೆ ಸಂದ ಗೌರವವಾಗಿದೆ.
ವಿದ್ಯೆ, ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಸಂಸ್ಥೆಯು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಮಂಗಳೂರು ದಸರಾ ಮಹೋತ್ಸವದ ಅನ್ನದಾನ ಸೇವೆಗೆ ನೀಡಿದ ಈ ಕೊಡುಗೆ ಸಂಸ್ಥೆಯ ಸೇವಾ ಪರಂಪರೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಈ ಮಹತ್ಕಾರ್ಯಕ್ಕೆ ಉದಾರವಾಗಿ ದೇಣಿಗೆ ನೀಡಿ ಸಹಕರಿಸಿದ ಕೇಂದ್ರ ಸಮಿತಿಯ ಪದಾಧಿಕಾರಿಗಳು, 35 ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಸ್ತ ಯುವವಾಹಿನಿ ಬಂಧುಗಳಿಗೆ ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಹಾಗೂ ಕ್ಷೇತ್ರದ ಆಡಳಿತ ಟ್ರಸ್ಟಿಗಳು ಉಪಸ್ಥಿತರಿದ್ದರು.







