ಬಜಪೆ, ಅ. 11: ನವರಾತ್ರಿ ಉತ್ಸವದ ಮೊದಲ ದಿನದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಮುರನಗರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಂದು ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನಡೆಯಿತು.

ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಶ್ರೀ ದೇವಿಯ ಭಕ್ತಿಗೀತೆಗಳನ್ನು ಶ್ರದ್ಧಾಭಕ್ತಿಯಿಂದ ಹಾಡಿ, ಕ್ಷೇತ್ರದಲ್ಲಿ ಭಕ್ತಿಮಯ ವಾತಾವರಣ ನಿರ್ಮಿಸಿದರು.
ಶ್ರೀ ಕ್ಷೇತ್ರದ ಧರ್ಮದರ್ಶಿ ಬಾಬು ಬೆಲ್ಚಡ ಅವರು ಮಾತನಾಡಿ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಧಾರ್ಮಿಕ ಸೇವೆಗಳ ಮೂಲಕ ಭಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವವಾಹಿನಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ, ಭಜನಾ ಸಂಚಾಲಕಿ ದಿವ್ಯ ಸುನಿಲ್, ಸಹಸಂಚಾಲಕ ವಿನೋಧರ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಭಜನಾ ಸಂಕೀರ್ತನೆಯ ಬಳಿಕ ಸದಸ್ಯರು ಶ್ರೀ ದೇವರ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.







