ಮೂಡುಬಿದಿರೆ ಅ 04 : ಭಾರತೀಯ ನೌಕಾಪಡೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಕಾರವಾರ ನೌಕಾನೆಲೆಯ ಐಎನ್‌ಎಸ್ ವಿಕ್ರಮಾದಿತ್ಯದ ಮುಖ್ಯ ವೈದ್ಯಾಧಿಕಾರಿ ಸರ್ಜನ್ ಕಮಾಂಡರ್ (ಡಾ.) ಅರ್ಜುನ್ ಅಂಚನ್ ಅವರ ವಿಶಿಷ್ಟ ಸಾಧನೆ ಹಾಗೂ ದೇಶಸೇವೆಯನ್ನು ಗುರುತಿಸಿ ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.

ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವದ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಧ್ವಜವಂದನೆ ಸ್ವೀಕರಿಸಿದ ಸರ್ಜನ್ ಕಮಾಂಡರ್ ಡಾ. ಅರ್ಜುನ್ ಅಂಚನ್ ಅವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಸಮುದ್ರದಾಳದ ಧೈರ್ಯ, ಆಕಾಶದಾಚೆಯ ಸಾಧನೆ ಹಾಗೂ ವೈದ್ಯಕೀಯ ಸೇವೆಯಲ್ಲಿನ ಮಾನವೀಯತೆಯನ್ನು ಮೈಗೂಡಿಸಿಕೊಂಡು ದೇಶಸೇವೆಯ ಪಥದಲ್ಲಿ ಹೆಮ್ಮೆಯ ಹೆಜ್ಜೆ ಗುರುತು ಮೂಡಿಸಿರುವ ಅವರ ಸಾಧನೆ ಶ್ಲಾಘನೀಯವಾಗಿದೆ. ವಿದ್ಯೆ, ವೃತ್ತಿಪರ ನೈಪುಣ್ಯ ಮತ್ತು ಕರ್ತವ್ಯನಿಷ್ಠೆಯ ಸಮನ್ವಯದೊಂದಿಗೆ ಭಾರತೀಯ ನೌಕಾಪಡೆಯಲ್ಲಿ ಸಲ್ಲಿಸುತ್ತಿರುವ ಅಮೂಲ್ಯ ಸೇವೆ ದೇಶದ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಯುವವಾಹಿನಿ ಅಭಿನಂದನೆ ಸಲ್ಲಿಸಿತು.
ದೇಶದ ರಕ್ಷಣೆಯ ಮಹತ್ತರ ಹೊಣೆಗಾರಿಕೆಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಮಾನವೀಯ ಸೇವೆ ಸಲ್ಲಿಸುತ್ತಿರುವ ಡಾ. ಅರ್ಜುನ್ ಅಂಚನ್ ಅವರ ಸೇವಾ ಪಯಣ ಇನ್ನಷ್ಟು ಎತ್ತರದ ಶಿಖರಗಳನ್ನು ತಲುಪಲಿ ಎಂದು ಯುವವಾಹಿನಿ ಸಂಸ್ಥೆ ಹಾರೈಸಿತು.

ಈ ಸಂದರ್ಭದಲ್ಲಿ ಶಾಸಕರಾದ ಉಮನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಮೋಹನ್ ಆಳ್ವಾ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ ಕೇಂದ್ರ ಸಮಿತಿ ಗೌರವ ಸಲಹೆಗಾರರಾದ ಡಾ.ಎನ್ ಟಿ ಅಂಚನ್, ಕಾರ್ಕಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಮಲ್ ಕುಮಾರ್, ನಿಶ್ಮಿತಾ ಸಮೂಹ ಸಂಸ್ಥೆಗಳ ಮಾಲಕರಾದ ನಾರಾಯಣ ಪಿ.ಎಂ , ಮೂಡಬಿದಿರೆ ಬಿಲ್ಲವ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಕರ್ಕೆರ, ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ರೇಖಾ ಗೋಪಾಲ್, ಕ್ರೀಡಾ ನಿರ್ದೇಶಕರಾದ ಶಂಕರ್ ಎ ಕೋಟ್ಯಾನ್, ಮೂಡಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ , ಘಟಕದ ಕ್ರೀಡಾ ನಿರ್ದೇಶಕರಾದ ಪ್ರಸಾದ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.







