ಪ್ರಯಾಗರಾಜ್, ಅ. 7: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ಅಯೋಧ್ಯೆ–ಕಾಶಿ–ಪ್ರಯಾಗರಾಜ್ ಧಾರ್ಮಿಕ ಯಾತ್ರೆಯ ಅಂಗವಾಗಿ ಯಾತ್ರಾರ್ಥಿಗಳು ಪ್ರಯಾಗರಾಜ್‌ನ ಪವಿತ್ರ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ನೆರವೇರಿಸಿ ಪುಣ್ಯಾನುಭವ ಪಡೆದರು.

ಗಂಗಾ, ಯಮುನಾ ಹಾಗೂ ಅಂತರ್ವಾಹಿನಿ ಸರಸ್ವತಿ ನದಿಗಳ ಪವಿತ್ರ ಸಂಗಮವೆಂದು ಪ್ರಸಿದ್ಧವಾಗಿರುವ ತ್ರಿವೇಣಿ ಸಂಗಮದಲ್ಲಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಿ ಭಕ್ತಿಭಾವ ಮೆರೆದರು. ಬಳಿಕ ಪ್ರಸಿದ್ಧ ಹನುಮಾನ್ ಮಂದಿರ ಹಾಗೂ ಶಕ್ತಿಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಯುವವಾಹಿನಿ ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ಈ ಧಾರ್ಮಿಕ ಯಾತ್ರೆಯು ಯಾತ್ರಾರ್ಥಿಗಳಿಗೆ ಆಧ್ಯಾತ್ಮಿಕ ಅನುಭವ ಹಾಗೂ ಧಾರ್ಮಿಕ ಕ್ಷೇತ್ರಗಳ ದರ್ಶನದ ಸಾರ್ಥಕತೆಯನ್ನು ನೀಡಿತು. ಪ್ರಯಾಗರಾಜ್‌ನ ಧಾರ್ಮಿಕ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯಾತ್ರಾರ್ಥಿಗಳು ಮುಂದಿನ ಯಾತ್ರಾ ಹಂತಗಳತ್ತ ಪ್ರಯಾಣ ಬೆಳೆಸಿದರು.







