ಶಕ್ತಿನಗರ ಅ 06: ಮಹಿಳೆಯರು ಕಾಲಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೌಶಲ್ಯಗಳನ್ನು ಕಲಿತು ಸ್ವ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಹೇಳಿದರು.

ಯುವವಾಹಿನಿ (ರಿ.) ಶಕ್ತಿನಗರ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಐದು ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಬೇಡಿಕೆಯಿರುವ ಕೌಶಲ್ಯಗಳನ್ನು ಕಲಿತರೆ ಮನೆಯಲ್ಲಿಯೇ ಸ್ವ ಉದ್ಯೋಗ ನಡೆಸಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ. ಮಹಿಳೆಯರು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು” ಎಂದು ಅವರು ತಿಳಿಸಿದರು.
ಯುವವಾಹಿನಿ (ರಿ.) ಶಕ್ತಿನಗರ ಘಟಕದ ಅಧ್ಯಕ್ಷ ತೇಜಸ್ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು ಕಲಿತ ಕೌಶಲ್ಯವನ್ನು ಮೆಚ್ಚಿ, ಮಹಿಳೆಯರು ಸ್ವ ಉದ್ಯೋಗ ಆರಂಭಿಸಲು ಯುವವಾಹಿನಿ ಸದಾ ಸಹಕಾರ ನೀಡಲಿದೆ ಎಂದರು. ಶಕ್ತಿನಗರ ಮೊಸರು ಕುಡಿಕೆ ಸಮಿತಿಯ ಅಧ್ಯಕ್ಷ ಪ್ರಾಣೇಶ್ ಅವರು ತರಬೇತಿಯ ಬಳಿಕ ಸ್ವ ಉದ್ಯೋಗ ಆರಂಭಿಸಲು ಲಭ್ಯವಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್‌ನ ಅಧ್ಯಕ್ಷ ತುಕಾರಾಂ ಪೂಜಾರಿ, ತರಬೇತಿಯ ಸಂಪನ್ಮೂಲ ವ್ಯಕ್ತಿ ಮಮತಾ ಸುದರ್ಶನ್ ಆಚಾರ್ಯ, ಯುವವಾಹಿನಿ ಶಕ್ತಿನಗರ ಘಟಕದ ಕಾರ್ಯದರ್ಶಿ ಪ್ರತಿಭಾ ಶಶಿರಾಜ್ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸೀರೆ ಕುಚ್ಚು ರಚನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂವರು ಮಹಿಳೆಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ತರಬೇತಿಯ ಸಂಪನ್ಮೂಲ ವ್ಯಕ್ತಿ ಮಮತಾ ಸುದರ್ಶನ್ ಆಚಾರ್ಯ ಹಾಗೂ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಒಟ್ಟು 43 ಮಹಿಳೆಯರು ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.
ಯುವವಾಹಿನಿ ಶಕ್ತಿನಗರ ಘಟಕದ ಆರೋಗ್ಯ ನಿರ್ದೇಶಕ ಕೃಷ್ಣಪ್ಪ ಅಂಚನ್ ಹಾಗೂ ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಾವತಿ ಉಪಸ್ಥಿತರಿದ್ದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಸ್ವಾಗತಿಸಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.







