ಬಂಟ್ವಾಳ, ಅ. 08: ಪ್ರಸ್ತುತ ಸಮಾಜದಲ್ಲಿ ಎದುರಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹೇಳಿದರು.

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಘಟನೆ ಪ್ರಮುಖ ಆಧಾರಸ್ತಂಭಗಳಾಗಿವೆ. ಶಿಕ್ಷಣದಿಂದ ಜ್ಞಾನ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಘಟನೆಯ ಮೂಲಕ ಸಮಾಜದ ಜನರನ್ನು ಒಗ್ಗೂಡಿಸಿ, ಪರಸ್ಪರ ಸಹಕಾರದೊಂದಿಗೆ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅವರು ತಿಳಿಸಿದರು.
ನಾರಾಯಣ ಗುರುಗಳ ತತ್ವಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಯುವಜನತೆ ಶಿಕ್ಷಣದೊಂದಿಗೆ ಸಂಘಟನಾ ಮನೋಭಾವ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅವರು ಅ. 08ರಂದು ಮಂಜುಳಾ–ನಾಗೇಶ್ ಪೂಂಜರೆಕೋಡಿ ಅವರ ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಆಯೋಜಿಸಿದ್ದ ‘ಗುರುತತ್ವವಾಹಿನಿ’ ಮಾಲಿಕೆ–81ರಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ನಾಗೇಶ್ ಕೊಂಕಣ ಪದವು , ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜೀತ್ ಅಮೀನ್ ಏರಮಲೆ, ನಿರ್ದೇಶಕರಾದ ನವೀನ್ ಕಾರಾಜೆ, ನವೀನ್ ಕುಡ್ಮೆರ್ ,ಜಗನ್ನಾಥ್ ಕಲ್ಲಡ್ಕ , ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ಉದಯ್ ಮೇನಾಡ್, ಚಿಂತನ್ ಕಡಂಬಳಿಕೆ, ಮಧುಸೂದನ್ ಮದ್ವ, ರಾಜೇಶ್ ಪೂಂಜರಕೋಡಿ, ಹರಿಣಾಕ್ಷಿ ನಾವೂರ್ ಮತ್ತು ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ ,ಶ್ರೀಧರ್ ಅಮೀನ್ , ಶಿವಾನಂದ, ಅರುಣ್ ಮಹಾಕಾಳಿ ಬೆಟ್ಟು ಹರೀಶ್ ಕುದನೆ, ರಾಜೇಶ್ ಸುವರ್ಣ ಉಪಸ್ಥಿತರಿದ್ದರು.
ಆತಿಥ್ಯ ವಹಿಸಿದ್ದ ನಾಗೇಶ್ ಪೂಂಜರಕೋಡಿ ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ ಧನ್ಯವಾದ ನೀಡಿದರು. ಪ್ರಥಮ ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸದರು.







