ಕಟಪಾಡಿ ಅ 04 : ಯುವವಾಹಿನಿ (ರಿ.) ಕಾಪು ಘಟಕದ ವತಿಯಿಂದ ಅಕ್ಟೋಬರ್ 4ರಂದು ಕಾರುಣ್ಯ ಆಶ್ರಯಧಾಮ ವೃದ್ಧಾಶ್ರಮ, ಅಗ್ರಹಾರ, ಕಟಪಾಡಿಯಲ್ಲಿ ವಾಸಿಸುತ್ತಿರುವ ಹಿರಿಯರೊಂದಿಗೆ ಆತ್ಮೀಯ ಸಹಭೋಜನ ಕಾರ್ಯಕ್ರಮ ನಡೆಯಿತು.

ಘಟಕದ ಸದಸ್ಯರು ವೃದ್ಧಾಶ್ರಮದ ಹಿರಿಯರೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಊಟವನ್ನು ಹಂಚಿಕೊಂಡು ಸಂತಸವನ್ನು ಹಂಚಿಕೊಂಡರು. ಹಿರಿಯರೊಂದಿಗೆ ಕಳೆದ ಈ ಕ್ಷಣಗಳು ಸದಸ್ಯರಿಗೆ ಪ್ರೀತಿ, ಮಾನವೀಯತೆ ಹಾಗೂ ಸೇವೆಯ ಮಹತ್ವವನ್ನು ಮತ್ತಷ್ಟು ಅರಿಯುವ ಸಾರ್ಥಕ ಅನುಭವ ನೀಡಿತು.
ಸಾಮಾಜಿಕ ಕಳಕಳಿಯೊಂದಿಗೆ ಯುವವಾಹಿನಿ ಕಾಪು ಘಟಕದ ವತಿಯಿಂದ ಆಶ್ರಯಧಾಮಕ್ಕೆ ₹5,000 ಆರ್ಥಿಕ ನೆರವು ನೀಡಲಾಯಿತು. ಸಹಭೋಜನ ಕಾರ್ಯಕ್ರಮದ ಊಟದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಟ್ಟ ಘಟಕದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಅವರನ್ನು ಘಟಕದ ವತಿಯಿಂದ ಹೃತ್ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರುಣ್ಯ ಆಶ್ರಯಧಾಮದ ವ್ಯವಸ್ಥಾಪಕ ಕುಮಾರ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಯುವವಾಹಿನಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲ ಸದಸ್ಯರಿಗೆ ಘಟಕದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು. “ಹಿರಿಯರ ಸೇವೆಯೇ ನಿಜವಾದ ಮಾನವೀಯತೆ; ಅವರ ಮುಖದ ನಗುವೇ ನಮ್ಮ ಸೇವೆಯ ಸಾರ್ಥಕತೆ.”







