ಕಾರ್ಕಳ ಸೆ 24: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಆದರ್ಶ ಮತ್ತು ಸಂದೇಶಗಳನ್ನು ಹರಿಕಥೆಯ ಮಾಧ್ಯಮದ ಮೂಲಕ ಜನಮಾನಸಕ್ಕೆ ಇನ್ನಷ್ಟು ಪರಿಚಯಿಸುವ ಅಗತ್ಯವಿದೆ ಎಂದು ಕರ್ನಾಟಕ ಸರಕಾರದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ ಅಭಿಪ್ರಾಯಪಟ್ಟರು.

ಸೆಪ್ಟೆಂಬರ್ 24ರಂದು ಶ್ರೀ ಕೃಷ್ಣ ಕ್ಷೇತ್ರ, ಆನೆಕೆರೆ, ಕಾರ್ಕಳದಲ್ಲಿ ಬಿಲ್ಲವ ಸಂಘ ಕಾರ್ಕಳ, ಶ್ರೀ ಕೃಷ್ಣ ಕ್ಷೇತ್ರ ಕಾರ್ಕಳ, ಯೂತ್ ಬಿಲ್ಲವ (ರಿ.) ಕಾರ್ಕಳ ಹಾಗೂ ಸೇವಾದಳದ ಸಹಕಾರದೊಂದಿಗೆ ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಆಯೋಜಿಸಲಾದ “ಗುರುಭ್ಯೋ ನಮಃ” ಕಾರ್ಯಕ್ರಮದ ಅಂಗವಾಗಿ ನಡೆದ “ಹರಿಕಥಾ ಸಾರಾಮೃತ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಹರಿಕಥೆಯಂತೆ ನಾರಾಯಣ ಗುರುಗಳ ಜೀವನ ಮತ್ತು ಸಂದೇಶಗಳನ್ನೊಳಗೊಂಡ ಗುರುಕಥೆಯೂ ಮೂಡಿಬರಬೇಕು. ಆ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಚಿಂತನೆ ಹಾಗೂ ಸಮಾಜ ಸುಧಾರಣೆಯ ಸಂದೇಶಗಳು ಇನ್ನಷ್ಟು ಜನರನ್ನು ತಲುಪುವಂತಾಗಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಯುವವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ನಾರಾಯಣ ಗುರು ತತ್ವ ಪ್ರಚಾರಕ ಸಂದೇಶ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶುಭಕರ್ ಪೂಜಾರಿ, ಯೂತ್ ಬಿಲ್ಲವ ಅಧ್ಯಕ್ಷ ಶರತ್ ಬೈಲಡ್ಕ, ಸೇವಾದಳದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕ್ಷೇತ್ರದ ಅರ್ಚಕ ಸದಾನಂದ ಶಾಂತಿ ಹಾಗೂ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಗಿರಿಜಾ ಪೂಜಾರ್ತಿ ಮತ್ತು ಮಕ್ಕಳು, ಕುಂಟಲ್ಪಾಡಿ ಉಪಸ್ಥಿತರಿದ್ದರು.
ಬಳಿಕ ಹರಿದಾಸ ಶ್ರೀ ಅನಂತಪದ್ಮನಾಭ ಭಟ್, ಕಾರ್ಕಳ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶಗಳನ್ನು ಆಧರಿಸಿ ಹರಿಕಥಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಾರಾಯಣ ಗುರುಗಳಿಗೆ ಮಂಗಳಾರತಿ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.







