ಮಾಣಿ: ಮನುಷ್ಯನ ಬದುಕಿನಲ್ಲಿ ಕರುಣೆ, ಶಾಂತಿ ಮತ್ತು ಸತ್ಯಕ್ಕೆ ಅತ್ಯಂತ ಮಹತ್ವವಿದೆ. ಕರುಣೆಯು ಮಾನವೀಯತೆಯನ್ನು ಬೆಳೆಸಿದರೆ, ಶಾಂತಿಯು ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ. ಸತ್ಯದ ಹಾದಿಯಲ್ಲಿ ನಡೆಯುವುದರಿಂದ ಜೀವನಕ್ಕೆ ನೈಜ ಅರ್ಥ ದೊರೆಯುತ್ತದೆ ಎಂದು ರೇಣುಕಾ ಕಣಿಯೂರು ಹೇಳಿದರು.

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ಸೆ. 29ರಂದು ನಿವೃತ್ತ ಸೈನಿಕ ಜಯಕರ ಸುಪ್ರೀತ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ತ್ವಗಳು ಮನುಷ್ಯನನ್ನು ಉತ್ತಮ ಬದುಕಿನತ್ತ ಕೊಂಡೊಯ್ಯುವ ದಾರಿದೀಪಗಳಾಗಿವೆ. ಗುರುಗಳ ಸಂದೇಶಗಳನ್ನು ಕೇವಲ ಆಲಿಸುವುದಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. “ಮನೆ ಮನೆಗೆ ಗುರುತತ್ತ್ವ ಸಂದೇಶ”ದಂತಹ ಕಾರ್ಯಕ್ರಮಗಳ ಮೂಲಕ ಗುರುತತ್ತ್ವದ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು ಭಾಗವಹಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಸಂದೇಶಗಳನ್ನು ಆಲಿಸಿದ್ದು ವಿಶೇಷವಾಗಿತ್ತು. ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ರಮೇಶ್ ಪೂಜಾರಿ ಹಾಗೂ ಹರೀಶ್ ಬಾಕಿಲ, ನಿರ್ದೇಶಕರಾದ ಸುರೇಶ್ ಪೂಜಾರಿ ಬಾಕಿಲ, ಸತೀಶ್ ಮರುವ, ರಾಜೇಶ್ ಕೋಟ್ಯಾನ್, ಬಾಲಕೃಷ್ಣ ಕೆರೆಕೋಡಿ, ಅಮಿತಾ ಪೆರ್ನೆ, ವಿಕ್ರಂ ಬಿಳಿಯೂರು, ಜನಾರ್ದನ ಕೊಡಂಗೆ, ಯಶೋಧರ ಬರಿಮಾರು, ಲೋಕೇಶ್, ಸುಜಿತ್ ಬಾಕಿಲ, ದಿನೇಶ್ ಪೆರಾಜೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪೂಜಾರಿ ವಂದಿಸಿದರು.








