ಮಾಣಿ ಸೆ 27: ನಾರಾಯಣ ಗುರುಗಳ ತತ್ತ್ವಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ 46ನೇ ಸಂಚಿಕೆ ಸೆಪ್ಟೆಂಬರ್ 27ರಂದು ಶಕೀಲಾ ಕೃಷ್ಣ ಮಿತ್ತಕೋಡಿ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಯುವವಾಹಿನಿಯ ಮಾಜಿ ಅಧ್ಯಕ್ಷ ರಾಜೇಶ್ ಬಲ್ಯ, “ನಾರಾಯಣ ಗುರುಗಳು ಸಮಾಜದ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಆಶಯ ಹೊಂದಿದ್ದರು. ದುಡಿಮೆಗೆ ಗೌರವ ನೀಡುತ್ತಾ, ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಬಳಸಿಕೊಂಡು ಸ್ವಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂಬ ಸಂದೇಶವನ್ನು ಸಾರಿದರು. ಉದ್ಯೋಗಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸುವ ಬದಲು ಸ್ವತಃ ದುಡಿದು ಬದುಕು ಕಟ್ಟಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ಗುರುಗಳ ಚಿಂತನೆಯ ಪ್ರಮುಖ ಅಂಶವಾಗಿತ್ತು” ಎಂದರು.
ಈ ಸಂದರ್ಭದಲ್ಲಿ ಶಕೀಲಾ ಕೃಷ್ಣ ಮಿತ್ತಕೋಡಿ ಮಾತನಾಡಿ, “ಯುವವಾಹಿನಿಯ ವತಿಯಿಂದ ಮನೆ ಮನೆಗೆ ತೆರಳಿ ನಾರಾಯಣ ಗುರುಗಳ ತತ್ತ್ವಸಂದೇಶವನ್ನು ಸಾರುತ್ತಿರುವುದು ಅತ್ಯಂತ ಉತ್ತಮ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮವನ್ನು ನನ್ನ ಮನೆಯಲ್ಲಿ ನಡೆಸಿರುವುದು ತುಂಬಾ ಸಂತೋಷ ತಂದಿದೆ” ಎಂದು ಹೇಳಿದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಅವರು ಸ್ವಾಗತಿಸಿದರು. ನೆಟ್ಲಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀಧರ ಪೂಜಾರಿ ಪರ್ಲೊಟ್ಟು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿಯ ಸಲಹಾ ಸಮಿತಿ ಅಧ್ಯಕ್ಷ ಸೋಮಪ್ಪ ಮಾದೇಲು, ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ಜಯಂತ ಪೂಜಾರಿ ಬರಿಮಾರು, ರಮೇಶ್ ಪೂಜಾರಿ ಮುಜಾಲ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸತೀಶ್ ಪೂಜಾರಿ ಸೇರಿದಂತೆ ಭಜನಾ ತಂಡದ ಸದಸ್ಯರಾದ ಯಶೋ, ಜನಾರ್ದನ ಕೊಡಂಗೆ, ಯಶೋಧರ ಮಾಣಿ, ಯಶೋಧರ ಬರಿಮಾರು, ಲೋಕೇಶ್, ಬಾಲಕೃಷ್ಣ ಶೇರ, ಸುಜಿತ್ ಬಾಕಿಲ, ಪವಿತ್ರಾ ಹಾಗೂ ಸುಜಾತಾ ಮಿತ್ತಕೋಡಿ ಉಪಸ್ಥಿತರಿದ್ದರು.
ನಾರಾಯಣ ಗುರು ತತ್ತ್ವ ನಿರ್ದೇಶಕ ಶ್ರೀಧರ ಪೂಜಾರಿ ಮುಜಾಲ ವಂದಿಸಿದರು. ಕೋಶಾಧಿಕಾರಿ ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.








