ಮಾಣಿ: ಸೆಪ್ಟೆಂಬರ್ 28 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮವು ರವಿ ಭಂಡಾರಿ ಕೆದಿಲ ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಅಮೀನ್ ಪೆರಾಜೆ, “ಪರಿಶುದ್ಧ ಮನಸ್ಸು ಮತ್ತು ನಿರ್ಮಲ ಹೃದಯದಿಂದಲೇ ದೇವರನ್ನು ಕಾಣಲು ಸಾಧ್ಯ. ನಾರಾಯಣ ಗುರುಗಳ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಗ್ರಾಮದ ದೈವದ ಚಾಕ್ರಿಯಾಗಿ ಸೇವೆ ಸಲ್ಲಿಸುತ್ತಿರುವ ರವಿ ಭಂಡಾರಿ ಮಾತನಾಡಿ, ನಾರಾಯಣ ಗುರುಗಳ ತತ್ತ್ವಸಂದೇಶಗಳು ತಮಗೆ ಬಹಳ ಪ್ರಿಯವಾಗಿದ್ದು, ತಮ್ಮ ಮನೆಯಲ್ಲಿ ಭಜನೆ ಹಾಗೂ ಗುರುತತ್ತ್ವ ಸಂದೇಶ ಕಾರ್ಯಕ್ರಮ ನಡೆಸಬೇಕೆಂಬ ಮಹದಾಸೆ ಹೊಂದಿದ್ದೆ. ತಮ್ಮ ಆಶಯದಂತೆ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದ್ದು, ಯುವವಾಹಿನಿ ಘಟಕಕ್ಕೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಹಾಗೂ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಸುರೇಶ್ ಪೂಜಾರಿ, ಸತೀಶ್ ಮುರುವ, ರಾಜೇಶ್ ಕೋಟ್ಯಾನ್, ಜನಾರ್ದನ, ಯಶೋದಾ, ಬಾಲಕೃಷ್ಣ ಶೇರಾ, ದಿನೇಶ್, ಸುಜಿತ್ ಸೇರಿದಂತೆ ಯುವವಾಹಿನಿ ಸದಸ್ಯರು ಹಾಗೂ ಮನೆಯ ಆಸುಪಾಸಿನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪೂಜಾರಿ ಮುಜಲ ವಂದನಾರ್ಪಣೆ ಸಲ್ಲಿಸಿದರು.








