ಕೆಂಜಾರು–ಕರಂಬಾರು, ಸೆ. 27: ಪ್ರತಿಯೊಬ್ಬ ನಾಗರಿಕನೂ ತನ್ನ ಕುಟುಂಬದ ಭವಿಷ್ಯದ ಸುರಕ್ಷತೆಗಾಗಿ ವಿಮಾ ರಕ್ಷಣೆ ಹೊಂದುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳು, ಉಳಿತಾಯ ಹಾಗೂ ವಿಮಾ ಯೋಜನೆಗಳನ್ನು ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಯುವವಾಹಿನಿ ಸಂಸ್ಥೆಯು ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ ಶಿಬಿರ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಮಂಗಳೂರು ಪ್ರಧಾನ ಅಂಚೆ ಕಚೇರಿ, ಪಾಂಡೇಶ್ವರ ವಿಭಾಗದ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ. ಸಾಲ್ಯಾನ್ ಹೇಳಿದರು.

ಯುವವಾಹಿನಿ (ರಿ.) ಕೆಂಜಾರು–ಕರಂಬಾರು ಘಟಕದ ವತಿಯಿಂದ ಸೆಪ್ಟೆಂಬರ್ 27ರಂದು ಶ್ರೀ ದೇವಿ ಭಜನಾ ಮಂದಿರ, ಕೆಂಜಾರು–ಕರಂಬಾರು ಇಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ತಿದ್ದುಪಡಿ ಹಾಗೂ ಆರೋಗ್ಯ ಮತ್ತು ಅಪಘಾತ ವಿಮಾ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಬಜ್ಪೆಯ ಮಾಜಿ ಉಪಾಧ್ಯಕ್ಷ ಶೇಖರ ಪೂಜಾರಿ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಪ್ರೀತೇಶ್ ಅರ್ಬಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಪಿ. ಸಾಲ್ಯಾನ್ ಭಾಗವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ವಿದ್ಯಾನಿಧಿ ಕೋಶಾಧಿಕಾರಿ ಪ್ರಸಾದ್ ಪಾಲನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, 71 ಮಂದಿ ಆಧಾರ್ ತಿದ್ದುಪಡಿ, 31 ಮಂದಿ ಆರೋಗ್ಯ ವಿಮೆ ಹಾಗೂ 11 ಮಂದಿ ಅಪಘಾತ ವಿಮೆ ಸೇರಿದಂತೆ ಒಟ್ಟು 110ಕ್ಕೂ ಅಧಿಕ ಮಂದಿ ವಿವಿಧ ಸೇವೆಗಳ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಶ್ರೀ ದೇವಿ ಭಜನಾ ಮಂದಿರದ ಆಡಳಿತ ಸಮಿತಿಗೆ ಘಟಕದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಘಟಕದ ಅಧ್ಯಕ್ಷ ಪ್ರೀತೇಶ್ ಅರ್ಬಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಿತೇಶ್ ಸಾಲ್ಯಾನ್ ಹಾಗೂ ಸಂಘಟನಾ ಕಾರ್ಯದರ್ಶಿ ಮಾಧವ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಜೇಶ್ ಎಸ್. ಪೂಜಾರಿ ವಂದಿಸಿದರು. ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು








