ಉಡುಪಿ, ಸೆ. 24: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಗುರು ಸತ್ಸಂಗ ಕಾರ್ಯಕ್ರಮವು ಘಟಕದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕರ್ಕೆರ ಅವರ ಮನೆಯಲ್ಲಿ ನಡೆಯಿತು.

ಮನೆಯವರು ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಭಜನಾ ಸಂಕೀರ್ತನೆ ನಡೆಯಿತು.
ಗುರು ಸಂದೇಶ ನೀಡಿದ ವಿಶ್ರಾಂತ ಪ್ರಾಧ್ಯಾಪಕಿ ಡಾ. ಸುನಿತಾ ವಿ. ಮಾತನಾಡಿ, ಗುರುಗಳ ತತ್ವ–ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ಭಜನೆಯ ಮೂಲಕ ಎಲ್ಲರೂ ಒಂದಾಗಿ ಸೇರುವ ಅವಕಾಶ ಕಲ್ಪಿಸುವ ಇಂತಹ ಗುರು ಸತ್ಸಂಗ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ ಎಂದರು.
ಮಾಜಿ ಅಧ್ಯಕ್ಷ ಭಾಸ್ಕರ ಸುವರ್ಣ ಪೂಜೆ ನೆರವೇರಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು. ಬಳಿಕ ಮನೆಯವರಿಗೆ ಪ್ರಸಾದ ವಿತರಿಸಲಾಯಿತು. ಗುರು ಸಂದೇಶ ನೀಡಿದ ಡಾ. ಸುನಿತಾ ವಿ. ಅವರನ್ನು ಪ್ರಸಾದ ಹಾಗೂ ಹೂವಿನ ಗಿಡ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಲೋಹಿತ್ ರೇಂಜಾಲ ಹಾಗೂ ಪ್ರಮುಖರಿಗೆ ಮಾಜಿ ಅಧ್ಯಕ್ಷರಾದ ರಘುನಾಥ್ ಮಾಬಿಯನ್, ಜಗದೀಶ್ ಕುಮಾರ್ ಮತ್ತು ಮಹಾಬಲ ಅಮೀನ್ ಪ್ರಸಾದ ನೀಡಿ ಗೌರವಿಸಿದರು. ‘ಮನೆಗೊಂದು ಮರ, ಊರಿಗೊಂದು ವನ’ ಎಂಬ ಆಶಯದಡಿ ಸಮಾಜ ಸೇವಾ ನಿರ್ದೇಶಕ ಸುಜಿತ್ ಮಟ್ಟು, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕಿ ಶಾರದಾ ಉಮೇಶ್ ಹಾಗೂ ಪ್ರಚಾರ ನಿರ್ದೇಶಕಿ ಶಕುಂತಲಾ ಸುಕೇಶ್ ಅವರು ಮನೆಯವರಿಗೆ ಹಾಗೂ ಗುರು ಸಂದೇಶ ನೀಡಿದ ಅತಿಥಿಗಳಿಗೆ ಗಿಡಗಳನ್ನು ವಿತರಿಸಿದರು.
ಸದಸ್ಯ ಅರವಿಂದ್ ಕೋಟ್ಯಾನ್ ಸ್ವಾಗತಿಸಿದರು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಮಾತನಾಡಿ, ಮುಂಬರುವ ಕ್ರೀಡಾಕೂಟ ಹಾಗೂ ಇತರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ವೀಕ್ಷಿತ್ ವಂದಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.







