ಮಾಣಿ, ಸೆ. 24: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸುಜಿತ್ ಬಾಕಿಲ ಅವರ ಮನೆಯಲ್ಲಿ ನಡೆಯಿತು.

“ಒಂದು ಜಾತಿ, ಒಂದು ಮತ, ಒಬ್ಬ ದೇವರು – ಮನುಷ್ಯನಿಗೆ” ಎಂಬ ನಾರಾಯಣ ಗುರುಗಳ ದೂರದೃಷ್ಟಿಯ ಚಿಂತನೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಜೀವಂತ ಸಾಕ್ಷಿಯಾಗಿದೆ ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.
ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಧಾರ್ಮಿಕತೆಯೊಂದಿಗೆ ಸಾಮಾಜಿಕ ಜಾಗೃತಿಯನ್ನೂ ಮೂಡಿಸುತ್ತಿರುವ ಕುದ್ರೋಳಿ ಕ್ಷೇತ್ರದ ಬೆಳವಣಿಗೆ ನಾರಾಯಣ ಗುರುಗಳ ಚಿಂತನೆಯ ಫಲಶ್ರುತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ವೈದನಾಥ ಬಾಕಿಲಗುತ್ತು ದೈವಸ್ಥಾನದ ಅರ್ಚಕ ಜನಾರ್ದನ ಪೂಜಾರಿ ಬಾಕಿಲಗುತ್ತು ಮಾತನಾಡಿ, ಗುರುಗಳ ಪವಾಡವೆಂದರೆ ಕೇವಲ ಅಚ್ಚರಿಯ ಘಟನೆಗಳಲ್ಲ; ಮನುಷ್ಯನ ಮನಸ್ಸು ಹಾಗೂ ಸಮಾಜದಲ್ಲಿ ಉಂಟುಮಾಡಿದ ಮಹತ್ತರ ಪರಿವರ್ತನೆಯೇ ನಿಜವಾದ ಪವಾಡ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಯುವವಾಹಿನಿಯ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಬಾಕಿಲ, ರಮೇಶ್ ಪೂಜಾರಿ, ನಿರ್ದೇಶಕರಾದ ಸುರೇಶ್ ಬಾಕಿಲ, ರಾಜೇಶ್ ಕೋಟ್ಯಾನ್, ಸತೀಶ್ ಮುರುವ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ಶ್ರೀಧರ ಪೂಜಾರಿ ವಂದಿಸಿದರು. ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡಂಗೆ ಅವರ ನೇತೃತ್ವದ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.







