ಮಾಣಿ, ಸೆ. 24: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸುಜಿತ್ ಬಾಕಿಲ ಅವರ ಮನೆಯಲ್ಲಿ ನಡೆಯಿತು.

“ಒಂದು ಜಾತಿ, ಒಂದು ಮತ, ಒಬ್ಬ ದೇವರು – ಮನುಷ್ಯನಿಗೆ” ಎಂಬ ಶ್ರೀ ನಾರಾಯಣ ಗುರುಗಳ ದೂರದೃಷ್ಟಿಯ ತತ್ತ್ವಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಜೀವಂತ ಸಾಕ್ಷಿಯಾಗಿದೆ ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.
ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ, ಧಾರ್ಮಿಕತೆಯೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಕುದ್ರೋಳಿ ಕ್ಷೇತ್ರದ ಬೆಳವಣಿಗೆಯು ಗುರುಗಳ ದೂರದೃಷ್ಟಿಯ ಚಿಂತನೆಯ ಫಲವನ್ನು ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಬೆಳೆಸುವಲ್ಲಿ ಇಂತಹ ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ವೈದನಾಥ ಬಾಕಿಲಗುತ್ತು ದೈವಸ್ಥಾನದ ಅರ್ಚಕರಾದ ಜನಾರ್ದನ ಪೂಜಾರಿ ಬಾಕಿಲಗುತ್ತು ಮಾತನಾಡಿ, ಗುರುಗಳ ಪವಾಡವೆಂದರೆ ಕೇವಲ ಅಚ್ಚರಿಯ ಘಟನೆಗಳಲ್ಲ; ಮನುಷ್ಯನ ಮನಸ್ಸು ಹಾಗೂ ಸಮಾಜದಲ್ಲಿ ಉಂಟಾದ ಮಹತ್ತರ ಪರಿವರ್ತನೆಯೇ ನಿಜವಾದ ಪವಾಡ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯುವವಾಹಿನಿಯ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಬಾಕಿಲ, ರಮೇಶ್ ಪೂಜಾರಿ, ನಿರ್ದೇಶಕರಾದ ಸುರೇಶ್ ಬಾಕಿಲ, ರಾಜೇಶ್ ಕೋಟ್ಯಾನ್, ಸತೀಶ್ ಮುರುವ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ಶ್ರೀಧರ ಪೂಜಾರಿ ವಂದಿಸಿದರು. ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡಂಗೆ ನೇತೃತ್ವದ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.








