ಮಾಣಿ, ಸೆ. 23: “ಬದುಕು ಒಂದು ಹೋರಾಟ. ಮನುಷ್ಯತ್ವ, ಸತ್ಯ, ಸಮಾನತೆ ಮತ್ತು ಪರಸ್ಪರ ಗೌರವವನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಪರಿವರ್ತನೆ ಸಾಧ್ಯ” ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ಪ್ರಶಾಂತ್ ಬಿ. ಅನಂತಾಡಿ ಹೇಳಿದರು.

ಜಾತಿ–ಮತಗಳ ಹೆಸರಿನಲ್ಲಿ ಸಮಾಜದಲ್ಲಿ ಬೇರೂರಿದ್ದ ಮೌಢ್ಯ, ಅಸಮಾನತೆ ಹಾಗೂ ತಾರತಮ್ಯಗಳ ವಿರುದ್ಧ ಹೋರಾಡಿ ಮಾನವ ಸಮಾನತೆಯ ಸಂದೇಶ ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಅವರು ಹೇಳಿದರು.
ಗೋಳಿಕಟ್ಟೆಯ ಗಂಗಾಧರ ಪಂಡಿತ್ ಅವರ ಮನೆಯಲ್ಲಿ ಸೆ. 23ರಂದು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಭಜನೆ ಸಂಕೀರ್ತನೆ ಹಾಗೂ ಗುರುತತ್ತ್ವ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ ಪಂಡಿತ್, ಯುವವಾಹಿನಿ ಮಾಣಿ ಘಟಕದ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮವು ಉತ್ತಮ ಸಮಾಜಮುಖಿ ಕಾರ್ಯವಾಗಿದೆ. ತಮ್ಮ ಮನೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದ್ದು, ಯುವವಾಹಿನಿಯೊಂದಿಗೆ ತಮ್ಮ ಕುಟುಂಬಕ್ಕೆ ಆತ್ಮೀಯ ನಂಟಿದೆ ಎಂದರು. ಭಜನೆ ಸಂಕೀರ್ತನೆ ಹಾಗೂ ಗುರುತತ್ತ್ವ ಸಂದೇಶದ ಮೂಲಕ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮುಂದುವರಿಯಲಿ. ಯುವವಾಹಿನಿ ಇನ್ನಷ್ಟು ಸಮಾಜಸೇವಾ ಕಾರ್ಯಗಳನ್ನು ಕೈಗೊಂಡು ಊರಿನ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಪೂಜಾರಿ ಬಾಕಿಲ, ಗೀತಾ ಚಂದ್ರಶೇಖರ್ ಗೋಳಿಕಟ್ಟೆ, ಜನಾರ್ದನ ಪೂಜಾರಿ ಕೊಡಂಗೆ, ಯಶೋಧರ ಬಾಲಕೃಷ್ಣ ಶೇರಾ, ಸುಜಿತ್ ಬಾಕಿಲ ಹಾಗೂ ಸಚಿನ್ ಅಮೀನ್ ಪೆರಾಜೆ ಸೇರಿದಂತೆ ಆತ್ಮೀಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ನಾರಾಯಣ ಗುರುತತ್ತ್ವ ನಿರ್ದೇಶಕ ಶ್ರೀಧರ್ ಪೂಜಾರಿ ಮುಜಲ ವಂದಿಸಿದರು. ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.








