ಸುರತ್ಕಲ್, ಸೆ. 20: ಯುವವಾಹಿನಿ (ರಿ.) ಸುರತ್ಕಲ್ ಘಟಕದ ಗುರುಸ್ಮರಣೆ ಕಾರ್ಯಕ್ರಮವು ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು. ಲೋಕೇಶ್ ಅಮೀನ್ ಹಾಗೂ ಶಿವಾನಂದ ದೀಪ ಬೆಳಗಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಭಜನಾ ಕ್ಷೇತ್ರದ ತೀರ್ಪುಗಾರರಾಗಿ ರಮೇಶ್ ಕಲ್ಮಾಡಿ, ಗಣೇಶ್ ನೀರ್ಕೆರೆ ಹಾಗೂ ಸುರೇಶ್ ಆಚಾರ್ಯ ಭಾಗವಹಿಸಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ಮಾಧವ್ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಕೇಂದ್ರ ಭಾಷಣಕಾರರಾದ ರಜತ್ ಆರ್. ಜತ್ತನ್ ಬಗ್ಗತೋಟ, ಕೇಂಜಗರಡಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂಲ, ಸಮಾಜದ ಹಾಗೂ ಬಿಲ್ಲವ ಸಮುದಾಯದ ಉನ್ನತಿಗೆ ಗುರುಗಳ ಕೊಡುಗೆ ಮತ್ತು ದೈವೀಶಕ್ತಿಯ ಕುರಿತು ಮಾತನಾಡಿದರು. ಅರ್ಜುನ್ ಭಂಡಾರ್ಕರ್ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕೃಷ್ಣ ಜೆ. ಕೋಟ್ಯಾನ್ ಹಾಗೂ ರಾಘವೇಂದ್ರ ರಾವ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಡತನದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಭಜನಾ ಕ್ಷೇತ್ರದಲ್ಲಿ ಸಾಧನೆಗೈದ ಯುವವಾಹಿನಿ (ರಿ.) ಸುರತ್ಕಲ್ ಘಟಕದ ಮಾಜಿ ಅಧ್ಯಕ್ಷ ವಿಜಯ್ ಎಸ್. ಕುಕ್ಯಾನ್ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ತಾಳಮದ್ದಳೆ ಕ್ಷೇತ್ರ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅನುರಾಧಾ ರಾಘವೇಂದ್ರ ರಾವ್ ಅವರನ್ನೂ ಗೌರವಿಸಲಾಯಿತು.
ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀ ರಾಮ ಮುಖ್ಯ ಪ್ರಾಣ ಕುಣಿತ ಭಜನಾ ತಂಡ ಪ್ರಥಮ, ಶ್ರೀ ಈಶ್ವರಿ ಭಜನಾ ಮಂಡಳಿ, ಕಾಂಜಿಲಕೋಡಿ ಪೊಳಲಿ ದ್ವಿತೀಯ ಹಾಗೂ ಶ್ರೀ ಶೇಷ ಶಯನ ಕುಣಿತ ಭಜನಾ ತಂಡ, ಬೈಕಂಪಾಡಿ ತೃತೀಯ ಸ್ಥಾನ ಗಳಿಸಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಸಂಘಟನಾ ಕಾರ್ಯದರ್ಶಿ ರಾಹುಲ್ ಎ. ಸನಿಲ್ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಶುಭ ಹಾರೈಸಿದರು.
ಘಟಕದ ಅಧ್ಯಕ್ಷೆ ರೇವತಿ ನವೀನ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಯೋಗೀಶ್ ಸನಿಲ್ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸನೀಶ್ ಎಸ್. ಅಂಚನ್ ಉಪಸ್ಥಿತರಿದ್ದರು. ಸುಲತಾ ಪೂಜಾರಿ ವಂದಿಸಿದರು. ಶಿವಾನಿ ಭಜನಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಸತೀಶ್ ಕೋಟ್ಯಾನ್ ಹಾಗೂ ಗಾಯತ್ರಿ ಸತೀಶ್ ನಿರೂಪಿಸಿದರು.







