ಪಡುಬಿದ್ರಿ, ಸೆ. 21: ತುಳುನಾಡಿನ ಜನಪದ ಸಂಸ್ಕೃತಿ ಹಾಗೂ ಆರಾಧನಾ ಪರಂಪರೆಯಲ್ಲಿ ಬೆರ್ಮೆರ್ ಮತ್ತು ಹಿರಿಯಾಕ್ಲೆನ ಆರಾಧನೆಗೆ ವಿಶೇಷ ಸ್ಥಾನವಿದೆ ಎಂದು ತುಳು ಜನಪದ ಆಸಕ್ತ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ 97ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆದ ‘ತುಳುನಾಡ್ ಬೆರ್ಮೆರ್ ಬೊಕ್ಕ ಹಿರಿಯಾಕ್ಲೆನ ಆರಾಧನೆ’ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ಬೆರ್ಮೆರ್ ದೈವವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿ ಆರಾಧಿಸುವ ಪರಂಪರೆ ಇದೆ. ನಮ್ಮ ಕಾರ್ಯಗಳು ಸುಸೂತ್ರವಾಗಿ ನಡೆಯಲು ಬೆರ್ಮೆರ್ ದೈವವೇ ಮೂಲ ಕಾರಣ ಎಂಬ ನಂಬಿಕೆ ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಡುಬರುತ್ತದೆ ಎಂದು ಅವರು ವಿವರಿಸಿದರು.
ಹಿರಿಯಾಕ್ಲೆನ ಆರಾಧನೆಯ ಕುರಿತು ಮಾತನಾಡಿದ ಅವರು, ತಮ್ಮ ಸುಖ-ಸಂತೋಷಗಳನ್ನು ತ್ಯಾಗ ಮಾಡಿ ಸಮಾಜದ ಹಾಗೂ ಇತರರ ಒಳಿತಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸಂತರು, ಮಹನೀಯರು ಮತ್ತು ಮನುಕುಲವನ್ನು ಒಂದುಗೂಡಿಸುವ ಸಂದೇಶ ಸಾರಿದವರನ್ನು ಹಿಂದಿನವರು ಗೌರವದಿಂದ ಆರಾಧಿಸುತ್ತಿದ್ದರು ಎಂದರು.

ಕಾರ್ಯಕ್ರಮವನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವ್ಯಕ್ತಿಯು ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಂತರು ಹಾಗೂ ಹಿರಿಯರ ಮಾರ್ಗದರ್ಶನದ ಹಾದಿಯಲ್ಲಿ ನಡೆಯುವುದು ಅಗತ್ಯ ಎಂದರು.
ಯುವ ಚಿಂತಕ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ ಮಾತನಾಡಿ, ತುಳು ಸಂಸ್ಕೃತಿಯ ವಿವಿಧ ಆಚರಣೆಗಳು ಹಾಗೂ ಪದ್ಧತಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಕುಟುಂಬದ ರಕ್ಷಣೆ ಮತ್ತು ಒಳಿತಿನ ನಂಬಿಕೆಯೊಂದಿಗೆ ದೈವಾರಾಧನೆ ಹಾಗೂ ಭೂತಾರಾಧನೆಗಳು ನಡೆದುಕೊಂಡು ಬಂದಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷ ನಿಖಿಲ್ ಪೂಜಾರಿ ಹಾಗೂ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಚೈತ್ರಾ ಮನೋಹರ್ ಉಪಸ್ಥಿತರಿದ್ದರು.
ಸುಚರಿತ ಎಲ್. ಅಮೀನ್ ಪ್ರಾರ್ಥಿಸಿದರು. ಸುಜಿತ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿರಾಜ್ ಕೋಟ್ಯಾನ್ ಹಾಗೂ ಹರೀಶ್ ಕೋಟ್ಯಾನ್ ಉಳ್ಳೂರು ನಿರೂಪಿಸಿದರು. ಚೈತ್ರಾ ಮನೋಹರ್ ವಂದಿಸಿದರು.






