ಮಂಗಳೂರು, ಸೆ. 19: ಉತ್ತಮ ಭವಿಷ್ಯಕ್ಕಾಗಿ ಆದಾಯಕ್ಕೆ ಅನುಗುಣವಾಗಿ ಉಳಿತಾಯ ಮಾಡುವುದರ ಜೊತೆಗೆ, ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವ ಜ್ಞಾನವೂ ಅಗತ್ಯ ಎಂದು ಹಣಕಾಸು ತಜ್ಞ ಬಾಲಾಜಿ ರಾವ್ ಹೇಳಿದರು.

ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ, ಐಸಿಐಸಿಐ ಮ್ಯೂಚುವಲ್ ಫಂಡ್ ಸಹಕಾರದೊಂದಿಗೆ ನಗರದ ದೀಪಾ ಕಂಫರ್ಟ್ನಲ್ಲಿ ನಡೆದ ಹಣಕಾಸು ನಿರ್ವಹಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಹಾಗೂ ಆಸ್ತಿ ಮೌಲ್ಯಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು. ವಿವಿಧ ವಯೋಮಾನದವರಿಗೆ ಸೂಕ್ತವಾಗುವ ಹೂಡಿಕೆ ವಿಧಾನಗಳು, ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್ಗಳಲ್ಲಿನ ಹೂಡಿಕೆಯ ಸಾಧ್ಯತೆಗಳು ಮತ್ತು ಅಪಾಯಗಳ ಕುರಿತು ಅವರು ಪಿಪಿಟಿ ಮೂಲಕ ವಿವರಿಸಿದರು.
ಷೇರು ಮಾರುಕಟ್ಟೆಯಲ್ಲಿ ಲಾಭದ ಸಾಧ್ಯತೆಯೊಂದಿಗೆ ನಷ್ಟದ ಅಪಾಯವೂ ಇರುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಅದರ ಸ್ವರೂಪ, ಅಪಾಯ ಹಾಗೂ ದೀರ್ಘಕಾಲೀನ ಉದ್ದೇಶಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದರು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಸಂಪನ್ಮೂಲ ವ್ಯಕ್ತಿ ಬಾಲಾಜಿ ರಾವ್ ಹಾಗೂ ಅತಿಥಿಗಳು ಸಾಂಕೇತಿಕವಾಗಿ ಮನಿ ಪ್ಲಾಂಟ್ಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಬಾಲಾಜಿ ರಾವ್ ಅವರನ್ನು ಘಟಕದ ಪರವಾಗಿ ಅಧ್ಯಕ್ಷರು ಗೌರವಿಸಿದರು.
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಸವಿತಾ ಕೋಟ್ಯಾನ್ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಶೇಖರ ಕಿನ್ನಿಗೋಳಿ ನಿರೂಪಿಸಿ ವಂದಿಸಿದರು ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಆಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.







