ಕೊಲ್ಯ, ಸೆ. 23: ಯುವವಾಹಿನಿ (ರಿ.) ಕೊಲ್ಯ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ KSTA ಮಂಗಳೂರು ಇವರ ಸಹಭಾಗಿತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಮಂಗಳೂರು ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ 30 ದಿನಗಳ ಉಚಿತ ಬ್ರೈಡಲ್ ಮೇಕಪ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸೆ. 23ರಂದು ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (KSTA) ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಅಧಿಕಾರಿ ಶೈಲಾ ಕಾರ್ಗಿ, ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ಶಿಬಿರಾರ್ಥಿಯೂ ಸ್ವಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, ಕೊಲ್ಯ ಘಟಕದ ಕಾರ್ಯಕ್ರಮಗಳು ಫಲಿತಾಂಶ ಆಧಾರಿತವಾಗಿದ್ದು, ಬ್ರೈಡಲ್ ಮೇಕಪ್ ತರಬೇತಿಯು ಮಹಿಳೆಯರಿಗೆ ಸ್ವಉದ್ಯೋಗದ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂದರು.
ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಹಾಗೂ ಕೊಲ್ಯ ಘಟಕದ ಮಾಜಿ ಅಧ್ಯಕ್ಷೆ ಸುಧಾ ಸುರೇಶ್, ತರಬೇತಿಯಿಂದ ಮಹಿಳೆಯರ ಜೀವನದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗಿದ್ದು, ಆಸಕ್ತಿಯಿಂದ ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಕೊಲ್ಯ ಘಟಕದ ದ್ವಿತೀಯ ಉಪಾಧ್ಯಕ್ಷ ಲತೀಶ್ ಪಾಪುದಡಿ ತರಬೇತಿಗೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷ ಜೀವನ್ ಕೊಲ್ಯ ತರಬೇತಿಯ ನಿಯಮಗಳು ಹಾಗೂ ಮಹತ್ವವನ್ನು ವಿವರಿಸಿ, ಪ್ರಸ್ತುತ ಹೆಚ್ಚಿನ ಬೇಡಿಕೆಯಿರುವ ಬ್ರೈಡಲ್ ಮೇಕಪ್ ಕೌಶಲ್ಯವನ್ನು ಕಲಿತು ಉತ್ತಮ ಆದಾಯ ಗಳಿಸುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ತರಬೇತಿಗೆ ಪ್ರಾಯೋಜಕತ್ವ ನೀಡಿದ ಸಿಡಾಕ್ ಹಾಗೂ ತರಬೇತಿಗೆ ಸ್ಥಳಾವಕಾಶ ಕಲ್ಪಿಸಿದ KSTA ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಿಡಾಕ್ ಉಪನಿರ್ದೇಶಕ ಶಿವಾನಂದ ಏಲಿಗಾರ್, KSTA ರಾಜ್ಯಾಧ್ಯಕ್ಷ ಸುರೇಶ್ ಸಾಲ್ಯಾನ್ ಹಾಗೂ ರಾಜ್ಯ ಕೋಶಾಧಿಕಾರಿ ಪ್ರಜ್ವಲ್ ಕುಮಾರ್ ಉಪಸ್ಥಿತರಿದ್ದರು. ಸುಮಾರು 35 ಮಹಿಳೆಯರು 30 ದಿನಗಳ ಉಚಿತ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.






