ಮಂಗಳೂರು ಸೆ 22 : ಸಮಾಜದಲ್ಲಿ ಬದಲಾವಣೆ ತರಲು ಬಯಸುವ ವ್ಯಕ್ತಿ ಮೊದಲು ತನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪರಿಸರವಾದಿ ನಾಗರಾಜ್ ಬಜಾಲ್ ಹೇಳಿದರು

ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆ. 22ರಂದು ನಡೆದ ಕಾರ್ಯಕ್ರಮದಲ್ಲಿ “ಕಸ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ” ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕಸವನ್ನು ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಕಸ ವಿಲೇವಾರಿ ಮಾಡುವ ಕಾರ್ಮಿಕರು ಸಮಾಜದ ಆರೋಗ್ಯ ಮತ್ತು ಪರಿಸರದ ಸ್ವಚ್ಛತೆಗಾಗಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರ ಸೇವೆಗೆ ಅಗತ್ಯವಾದ ಗೌರವ ಮತ್ತು ಕೃತಜ್ಞತೆ ದೊರೆಯುತ್ತಿಲ್ಲ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಕಸ ವಿಲೇವಾರಿ ಪ್ರದೇಶಗಳಿಂದ ಉಂಟಾಗುವ ಮಾಲಿನ್ಯವು ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳಗಳಲ್ಲಿ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿರುವ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಪರಿಸರ ಸಂರಕ್ಷಣೆ ಮನೆಯಲ್ಲಿಯೇ ಆರಂಭವಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವು ಸಂಜೆ 5.30ರಿಂದ 6.30ರವರೆಗೆ ಭಜನೆಯೊಂದಿಗೆ ಆರಂಭವಾಯಿತು. ಸಂಜೆ 6.30ಕ್ಕೆ ಸದಾನಂದ ಪೂಜಾರಿ, ಕುಳಾಯಿ ಅವರು ಗುರುಪೂಜೆ ನೆರವೇರಿಸಿದರು. ಗುರುಪೂಜೆಯ ಸೇವೆಯನ್ನು ಪ್ರಚಾರ ನಿರ್ದೇಶಕ ಚರಣ್ ಪೂಜಾರಿ ವಹಿಸಿದ್ದರು.
ಸಂಜೆ 7 ಗಂಟೆಗೆ ಗುರು ಪ್ರಾರ್ಥನೆಯೊಂದಿಗೆ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಆರಂಭವಾಯಿತು. ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ನಾಗರಾಜ್ ಬಜಾಲ್ ಅವರನ್ನು ಘಟಕದ ಮಾಜಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಅವರು ಹೂ ನೀಡಿ ಸ್ವಾಗತಿಸಿದರು.
ಪರಿಸರ ಸಂರಕ್ಷಣೆ ಹಾಗೂ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದ ನಾಗರಾಜ್ ಬಜಾಲ್ ಅವರನ್ನು ಘಟಕದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳ ಪರವಾಗಿ ಗೌರವಿಸಲಾಯಿತು. ಕಾರ್ಯದರ್ಶಿ ಉಷಾ ವರದಿ ಮಂಡಿಸಿ ಅನುಮೋದನೆ ಪಡೆದರು. ಸದಸ್ಯೆ ದೀಕ್ಷಾ ಸಾಲ್ಯಾನ್ ಗುರು ಸಂದೇಶ ವಾಚಿಸಿದರು. ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ವಂದಿಸಿದರು. ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು






