ಬೆಳ್ಳಾರೆ, ಸೆ. 20: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಸೆ. 20ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ. ಕೃಷ್ಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೇಲುಬೆಟ್ಟು ಅವರು ಗುರು ಸಂದೇಶ ನೀಡುತ್ತಾ, “ಬ್ರಹ್ಮಶ್ರೀ ನಾರಾಯಣ ಗುರುಗಳು ಮಹತ್ಕಾರ್ಯ ಮಾಡಿದವರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಅವರು ಎಲ್ಲರಿಗೂ ಶಿಕ್ಷಣದ ಅವಕಾಶ ದೊರೆಯುವಂತೆ ಮಾಡಿದರು. ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಸಮಾಜ ಹಾಗೂ ಸಂಸಾರ ಬೆಳಗುವಂತೆ ಶ್ರಮಿಸಿದರು. ಜನರಿಗೆ ವೃತ್ತಿಪರ ತರಬೇತಿ ನೀಡಲು ಸಹ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ವಿಚಾರಧಾರೆ, ಸಂದೇಶ, ಹೋರಾಟ ಹಾಗೂ ಮನುಷ್ಯತ್ವವನ್ನು ಕಟ್ಟುವಂತಹ ಚಳುವಳಿ ನಮಗೆಲ್ಲರಿಗೂ ಪ್ರೇರಣೆಯಾಗಲಿ” ಎಂದು ಹೇಳಿದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರಿನ ಪ್ರಥಮ ಉಪಾಧ್ಯಕ್ಷೆ ವಿದ್ಯಾರಾಕೇಶ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
2025–26ನೇ ಸಾಲಿನಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಬಿಎಸ್ಸಿ ಅನಿಮೇಶನ್ ಮತ್ತು ದೃಶ್ಯ ಪರಿಣಾಮಗಳು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಪೂರ್ಣಾ ಸಿ. ಅವರನ್ನು ಶಾಲು ಹೊದಿಸಿ, ಫಲ, ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ, ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ, ಕಾರ್ಯದರ್ಶಿ ರಂಜಿತ್ ದರ್ಖಾಸ್ತು, ಕಟ್ಟಡ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅಲೆಕ್ಕಾಡಿ ಹಾಗೂ ಗೌರವಾಧ್ಯಕ್ಷ ಎನ್.ಎಸ್.ಡಿ. ವಿಠಲದಾಸ್ ಉಪಸ್ಥಿತರಿದ್ದರು.
ನೂತನ ಪ್ರವೀಣ್ ನೆಟ್ಟಾರು ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಹರೀಶ ಕಾವಿನಮೂಲೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪುರೋಹಿತರಾದ ಪಿ.ಡಿ. ಹರೀಶ ಶಾಂತಿ ಪುತ್ತೂರು ಅವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು. ಪೂರ್ವಾಹ್ನ ಯುವವಾಹಿನಿ ಸುಳ್ಯ ಘಟಕದ ಸದಸ್ಯರಿಂದ ಭಜನಾ ಸಂಕೀರ್ತನೆ ಹಾಗೂ ಗುರುಪೂಜೆ ನಡೆಯಿತು.






