ಕೊಲ್ಯ ಸೆ 20 : ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಈ ವರ್ಷದ ಮೊದಲ ದೇಗುಲ ದರ್ಶನ ಪ್ರವಾಸವನ್ನು ಆಯೋಜಿಸಲಾಗಿದ್ದು, ಸುಮಾರು 60 ಮಂದಿ ಸದಸ್ಯರು ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು. ತಲಪಾಡಿಯಿಂದ ಆರಂಭಗೊಂಡ ಈ ಪವಿತ್ರ ಪಯಣವು ವಿವಿಧ ಪುಣ್ಯಕ್ಷೇತ್ರಗಳ ದರ್ಶನದೊಂದಿಗೆ ಭಕ್ತಿ, ಸ್ನೇಹ, ಒಗ್ಗಟ್ಟು ಹಾಗೂ ಸಂತಸದ ಅನುಭವವನ್ನು ನೀಡಿತು. ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಶಶಿಕಾಂತ್ ಪರ್ಯತ್ತೂರು ಪ್ರಾರ್ಥನೆ ನೆರವೇರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ಘಟಕದ ಅಧ್ಯಕ್ಷ ಜೀವನ್ ಕೊಲ್ಯ ದೇಗುಲ ದರ್ಶನಕ್ಕೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಪ್ರಯಾಣಕ್ಕೆ ಶುಭ ಹಾರೈಸಿದರು.

ಪ್ರಯಾಣದ ಮೊದಲ ಭೇಟಿಯಾಗಿ ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾದ ಮಂಜೇಶ್ವರ ಶ್ರೀ ಪದ್ಮನಾಭ ಕ್ಷೇತ್ರಕ್ಕೆ ತೆರಳಲಾಯಿತು. ಭಕ್ತಿಯಿಂದ ದೇವರ ದರ್ಶನ ಪಡೆದ ಸದಸ್ಯರು ಪುರಾತನ ಕ್ಷೇತ್ರದ ಮಹತ್ವವನ್ನು ತಿಳಿದುಕೊಂಡರು. ಘಟಕದ ಮಾಜಿ ಅಧ್ಯಕ್ಷ ಲತೀಶ್ ಸಂಕೋಳಿಗೆ ಅವರು ಕ್ಷೇತ್ರದ ಇತಿಹಾಸ, ಹಿನ್ನೆಲೆ ಹಾಗೂ ವಿಶೇಷತೆಗಳ ಕುರಿತು ವಿವರಿಸಿದರು. ಬಳಿಕ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಮೂಲಕ ಸದಸ್ಯರಲ್ಲಿ ಕುತೂಹಲ ಮೂಡಿಸಿದರು.
ಮುಂದೆ ಕುಂಬ್ಳೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಸಂತಾನ ಕೃಷ್ಣನೆಂದೇ ಪ್ರಸಿದ್ಧವಾಗಿರುವ ಕಣಿಪುರ ಗೋಪಾಲಕೃಷ್ಣನ ದರ್ಶನವನ್ನು ಭಕ್ತಿಭಾವದಿಂದ ಪಡೆದುಕೊಂಡರು. ನಂತರ ದೇಹದ ಕೆಡು ನಿವಾರಣೆಗೆ ಪ್ರಸಿದ್ಧವಾದ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ಚರ್ಮವ್ಯಾಧಿ ನಿವಾರಣೆಗೆ ಸಂಬಂಧಿಸಿದ ಕೊಳದ ಮಹತ್ವವನ್ನು ತಿಳಿದುಕೊಂಡು ದೇವರಲ್ಲಿ ಪ್ರಾರ್ಥಿಸಿದರು.
ಮುಂದಿನ ಭೇಟಿಯಾಗಿ ದೈವಿಕ ಮೊಸಳೆ ‘ಬಬಿಯಾ’ ಇರುವ ಸರೋವರ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ತೆರಳಲಾಯಿತು. ಕ್ಷೇತ್ರದ ವಿಶೇಷತೆಗಳನ್ನು ತಿಳಿದುಕೊಂಡು ಶ್ರೀ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದಸ್ಯರು ಪುಳಕಿತರಾದರು. ಬಸ್ ಪ್ರಯಾಣದ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಸುರೇಶ್ ಬಿಲ್ಲವ ಹಾಗೂ ಮಾಜಿ ಅಧ್ಯಕ್ಷ ಲತೀಶ್ ಸಂಕೋಳಿಗೆ ಅವರು ವಿವಿಧ ದೇವಸ್ಥಾನಗಳ ಕುರಿತು ಪ್ರಶ್ನೆಗಳನ್ನು ಕೇಳಿ ಸದಸ್ಯರ ಜ್ಞಾನವನ್ನು ಪರೀಕ್ಷಿಸಿದರು. ಸದಸ್ಯರು ಉತ್ಸಾಹದಿಂದ ಉತ್ತರಿಸಿದರು. ಬಳಿಕ ಬಸ್‌ನಲ್ಲಿಯೇ ಅಂತ್ಯಾಕ್ಷರಿ ಹಾಗೂ ಹಾಡುಗಳ ಮೂಲಕ ಪ್ರಯಾಣವನ್ನು ಮತ್ತಷ್ಟು ಸಂತಸದಾಯಕವಾಗಿಸಿದರು.
ಮುಂದೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಗಜಪೃಷ್ಠ ಶೈಲಿಯಲ್ಲಿರುವ ದೇವಾಲಯದ ವಿಶೇಷತೆಗಳ ಕುರಿತು ತಿಳಿದುಕೊಂಡರು. ನಂತರ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಕ್ಷೇತ್ರದಲ್ಲಿಯೇ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಅದಾದ ಬಳಿಕ ಪ್ರವಾಸದ ಪ್ರಮುಖ ಆಕರ್ಷಣೆಯಾದ ಬೇಕಲ್ ಕೋಟೆಗೆ ತೆರಳಲಾಯಿತು. ಕೋಟೆಯ ಸುಂದರ ಪರಿಸರವನ್ನು ವೀಕ್ಷಿಸಿದ ಸದಸ್ಯರು ವಿವಿಧ ಮನೋರಂಜನಾ ಆಟಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಆಟಗಳ ಜವಾಬ್ದಾರಿಯನ್ನು ನಂದನ್, ನಿತಿನ್, ಮುಖೇಶ್ ಹಾಗೂ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ವಹಿಸಿಕೊಂಡು ಎಲ್ಲರನ್ನೂ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಿದರು. ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಜೆ ಸುಮಾರು 6.30ಕ್ಕೆ ಬೇಕಲ್ ಕೋಟೆಯಿಂದ ಹೊರಟ ತಂಡವು ದಿನದ ಕೊನೆಯ ದೇಗುಲ ದರ್ಶನವಾಗಿ ತ್ರಿಕರಿನಾಡು ದೇವಸ್ಥಾನಕ್ಕೆ ಭೇಟಿ ನೀಡಿತು. ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಈ ಪುಣ್ಯಕ್ಷೇತ್ರದಲ್ಲಿ ಪರಶಿವನ ದರ್ಶನ ಪಡೆದು ದೇಗುಲ ದರ್ಶನದ ಪವಿತ್ರ ಪಯಣವನ್ನು ಮುಕ್ತಾಯಗೊಳಿಸಲಾಯಿತು.
ಹಿಂತಿರುಗುವ ಬಸ್ ಪ್ರಯಾಣದಲ್ಲಿಯೂ ಸದಸ್ಯರು ಹಾಡು, ನೃತ್ಯ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ದಿನವಿಡೀ ದೇಗುಲ ದರ್ಶನ, ಪ್ರವಾಸ, ಆಟ–ಮನರಂಜನೆ ಹಾಗೂ ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ಎಲ್ಲರಿಗೂ ಮರೆಯಲಾಗದ ಅನುಭವವನ್ನು ನೀಡಿದವು.
ಒಟ್ಟಾರೆಯಾಗಿ, ಕೊಲ್ಯ ಘಟಕದ ದೇಗುಲ ದರ್ಶನ ಪ್ರವಾಸವು ಭಕ್ತಿ, ಸ್ನೇಹ, ಒಗ್ಗಟ್ಟು, ಸಂತೋಷ ಹಾಗೂ ಮನರಂಜನೆಯ ಸುಂದರ ಸಂಗಮವಾಗಿತ್ತು. ವಿವಿಧ ಪುಣ್ಯಕ್ಷೇತ್ರಗಳ ದರ್ಶನದ ಜೊತೆಗೆ ಸಹಪ್ರಯಾಣಿಕರೊಂದಿಗೆ ನಗು–ನಲಿವು ಹಂಚಿಕೊಂಡು ಕಳೆದ ಈ ದಿನವು ಸದಸ್ಯರ ಮನದಲ್ಲಿ ಸದಾ ನೆನಪಾಗಿ ಉಳಿಯುವಂತಹ ಸುಂದರ ಅನುಭವವಾಯಿತು.






