ಮಾಣಿ, ಸೆ. 20: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸದಾನಂದ ಪೂಜಾರಿ ಬರಿಮಾರು ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ನಿರ್ದೇಶಕ ರಾಜೇಶ್ ಬಲ್ಯ, ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ಬದಲಾವಣೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ದಾರಿದೀಪವಾಗಿದ್ದಾರೆ. ಮದ್ಯಪಾನ, ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಅವರು, ಸರಳತೆ, ಶಿಕ್ಷಣ ಹಾಗೂ ಮಾನವೀಯತೆಯ ಮಹತ್ವವನ್ನು ಸಮಾಜಕ್ಕೆ ಸಾರಿದ್ದಾರೆ ಎಂದು ಹೇಳಿದರು.
ಸಮಾಜ ಸೇವೆಯಲ್ಲಿ ಸದಾನಂದ ಪೂಜಾರಿ ಬರಿಮಾರು ಅವರು 50 ಬಾರಿ ರಕ್ತದಾನ ಮಾಡಿರುವ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿ, ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಲಾಯಿತು. ಸದಾನಂದ ಪೂಜಾರಿ ಅವರು ಯುವವಾಹಿನಿ ಮಾಣಿ ಘಟಕವು ನಡೆಸುತ್ತಿರುವ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಜಯಂತ ಪೂಜಾರಿ ಬರಿಮಾರು, ರಮೇಶ್ ಪೂಜಾರಿ ಮುಜಲ, ಬಾಲಕೃಷ್ಣ ದೇಲಬೆಟ್ಟು, ಪ್ರಭಾಕರ ಬರಿಮಾರು ಹಾಗೂ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ನಾರಾಯಣ ಗುರು ತತ್ವ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.






