ಕೂಳೂರು ಸೆ 20 : “ಜೀವ ಜಡರೂಪ ಪ್ರಪಂಚವನದಾವುದೋ | ಆವರಿಸಿಕೊಂಡು ಮೊಳನೆರೆದುಮಿಹುದಂತೆ || ಭಾವಕೊಳಪಡದಂತೆ ಅಳತೆಗಳವಡದಂತೆ | ಆ ವಿಶೇಷಕೆ ನಮಿಸೊ – ಮಂಕುತಿಮ್ಮ ||” ಎಂಬ ಡಿ.ವಿ. ಗುಂಡಪ್ಪ (ಡಿ.ವಿ.ಜಿ.) ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಜೀವನದ ಅಗಾಧತೆಯತ್ತ ನಮ್ಮನ್ನು ಕರೆದೊಯ್ಯುತ್ತವೆ.

ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸೆಪ್ಟೆಂಬರ್ 20ರಂದು ಕೇರಳ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ “ಕ್ಷೇತ್ರ ದರ್ಶನ – 2026” ಆಧ್ಯಾತ್ಮಿಕ ಹಾಗೂ ಸ್ಮರಣೀಯ ಪ್ರವಾಸವನ್ನು ಆಯೋಜಿಸಲಾಯಿತು.
ಬೆಳಗ್ಗೆ 5 ಗಂಟೆಗೆ ಕೂಳೂರಿನಿಂದ ಪ್ರವಾಸ ಆರಂಭಗೊಂಡು ಮಂಜೇಶ್ವರ ಅನಂತೇಶ್ವರ ದೇವಸ್ಥಾನ, ಅನಂತ ಪದ್ಮನಾಭ ದೇವಸ್ಥಾನ, ಮಧೂರು ಶ್ರೀ ಮಹಾಗಣಪತಿ ದೇವಸ್ಥಾನ, ತಾಳಿಪರಂಬ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪರಶ್ಶಿನಿಕಡವು ಶ್ರೀ ಮುತ್ತಪ್ಪನ್ ದೇವಸ್ಥಾನ, ಮಾಡಾಯಿ ಕಾವು ಭಗವತಿ ದೇವಸ್ಥಾನ, ಮುಜುಂಗಾವು ಪಾರ್ಥಸಾರಥಿ ದೇವಸ್ಥಾನ, ಕಣಿಯೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ತ್ರಿಕ್ಕಾರ ಶಿವ ದೇವಸ್ಥಾನ ಸೇರಿದಂತೆ ವಿವಿಧ ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ನೀಡಲಾಯಿತು.
ಕ್ಷೇತ್ರ ದರ್ಶನದಲ್ಲಿ ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷರೊಂದಿಗೆ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು, ಘಟಕದ ಮಾಜಿ ಅಧ್ಯಕ್ಷರುಗಳು ಸೇರಿದಂತೆ 50ಕ್ಕೂ ಅಧಿಕ ಸದಸ್ಯರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಪ್ರವಾಸದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಇತಿಹಾಸ, ವಾಸ್ತುಶಿಲ್ಪ, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು, ಕಲಾ ಕೆತ್ತನೆಗಳು ಹಾಗೂ ಅಲ್ಲಿನ ನೈಸರ್ಗಿಕ ಪರಿಸರವನ್ನು ವೀಕ್ಷಿಸಿ ಅವುಗಳ ವೈಶಿಷ್ಟ್ಯವನ್ನು ಅರಿಯುವ ಅವಕಾಶ ದೊರೆಯಿತು. ಯಾತ್ರಾರ್ಥಿಗಳಿಗೆ ಘಟಕದ ವತಿಯಿಂದ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. “ಕ್ಷೇತ್ರ ದರ್ಶನ – 2026”ರ ಸಂಚಾಲಕರಾಗಿ ಹರಿಣಿ ಮಾಲೆಮಾರ್ ಹಾಗೂ ಸಹ ಸಂಚಾಲಕರಾಗಿ ಸುಮಾ ಶಿವು ಕೋಡಿಕಲ್ ಕಾರ್ಯನಿರ್ವಹಿಸಿದರು.
ಪ್ರವಾಸದ ಕೊನೆಯಲ್ಲಿ ಸದಸ್ಯರು ಹಾಗೂ ಕುಟುಂಬಸ್ಥರು ತಮ್ಮ ಕ್ಷೇತ್ರ ದರ್ಶನದ ಅನುಭವ, ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಧ್ಯಾತ್ಮಿಕ ಅನುಭವದ ಜೊತೆಗೆ ಸದಸ್ಯರ ನಡುವೆ ಆತ್ಮೀಯತೆ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ ಈ ಪ್ರವಾಸವು ಸ್ಮರಣೀಯವಾಗಿ ಮೂಡಿಬಂದಿತು.






