ಮಾಣಿ, ಸೆ. 18: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೀನಪ್ಪ ಪೂಜಾರಿ ಬರಿಮಾರು ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ದಿನಕರ ಅಂಚನ್ ಬರಿಮಾರು ಮಾತನಾಡಿ, “ಮಾನವಕುಲಕ್ಕೆ ಸಮಾನತೆಯ ಸಂದೇಶ ನೀಡಿದ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ, ಮತ, ಭೇದಭಾವಗಳನ್ನು ಮೀರಿ ಮಾನವೀಯತೆಯ ಬದುಕಿಗೆ ದಾರಿ ತೋರಿಸಿದರು. ಶಿಕ್ಷಣದ ಮೂಲಕ ಜ್ಞಾನವನ್ನು ಬೆಳೆಸಬೇಕು, ಸಂಘಟನೆಯ ಮೂಲಕ ಸಮಾಜವನ್ನು ಬಲಪಡಿಸಬೇಕು ಹಾಗೂ ಸಮಾನತೆಯ ಮೂಲಕ ಎಲ್ಲರನ್ನೂ ಒಂದಾಗಿ ಕಾಣಬೇಕು ಎಂಬುದು ಗುರುಗಳ ತತ್ವದ ಸಾರವಾಗಿದೆ. ಅವರ ಸಂದೇಶಗಳು ಇಂದಿಗೂ ಸಮಾಜದ ಪ್ರಗತಿಗೆ ಮಾರ್ಗದರ್ಶಕವಾಗಿವೆ. ಗುರುತತ್ವವನ್ನು ಮನೆ ಮನೆಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಸಂಘಟನಾ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದರು.
ಕಾರ್ಯಕ್ರಮದಲ್ಲಿ ಜನಾರ್ದನ, ಲೋಕೇಶ್, ಬಾಲಕೃಷ್ಣ, ಯಶೋಧರ, ಸುಜಿತ್ ಬಾಕಿಲ ಹಾಗೂ ಸಚಿನ್ ಪೆರಾಜೆ ಅವರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದರು. ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಲ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಘಟಕದ ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ಊರಿನ ಗಣ್ಯರು ಮತ್ತು ನೆರೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಹರೀಶ್ ಪೂಜಾರಿ ಬಾಕಿಲ ಅವರ ಜನ್ಮದಿನವನ್ನು ಹೂಗುಚ್ಛ ನೀಡಿ ಶುಭಾಶಯ ಕೋರುವ ಮೂಲಕ ಆಚರಿಸಲಾಯಿತು. ಬಾಲಕೃಷ್ಣ ಶೇರಾ ಅವರು ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ಶುಭ ಹಾರೈಸಿದರು.
ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ನಾರಾಯಣ ಗುರು ತತ್ವ ಪ್ರಸಾರ ನಿರ್ದೇಶಕ ಶ್ರೀಧರ್ ಪೂಜಾರಿ ಮುಜಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.






