ಮಾಣಿ, ಸೆ. 11: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮವು ಸೆ. 11ರಂದು ಕೇಶವ ಪೂಜಾರಿ ಬರಿಮಾರು ಅವರ ಮನೆಯಲ್ಲಿ ನಡೆಯಿತು.

ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜನಾರ್ದನ ಪೂಜಾರಿ ಕೊಡಂಗೆ ಹಾಗೂ ತಂಡದವರು ಭಜನಾ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತ್ರಿವೇಣಿ ರಮೇಶ್, “ಸಂಘಟನೆಯೇ ಸಮಾಜದ ಶಕ್ತಿ, ಸೇವೆಯೇ ಅದರ ಸಾರ್ಥಕತೆ” ಎಂಬ ಸಂದೇಶವನ್ನು ನೀಡಿದರು.
ಸಂಘಟನೆಯ ಮೂಲಕ ಕುಟುಂಬಗಳಲ್ಲಿ ಒಗ್ಗಟ್ಟನ್ನು ಬೆಳೆಸಬೇಕು. ಸೇವಾ ಮನೋಭಾವದಿಂದ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು, ಎಲ್ಲ ಧರ್ಮ ಹಾಗೂ ಜಾತಿಯ ಜನರನ್ನು ಸಮಾನವಾಗಿ ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಒಗ್ಗಟ್ಟಿನ ಸಮಾಜವೇ ಬಲಿಷ್ಠ ಸಮಾಜವಾಗಿದ್ದು, ನಾರಾಯಣ ಗುರುಗಳ ತತ್ವಗಳು ನಮ್ಮ ಬದುಕಿಗೆ ದಾರಿದೀಪವಾಗಬೇಕು ಎಂದು ಅವರು ಹೇಳಿದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಪೂಜಾರಿ ಮುಜಲ ವಂದಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಯುವವಾಹಿನಿ ಸದಸ್ಯರು ಭಾಗವಹಿಸಿದ್ದರು.







