ಕೊಲ್ಯ: ಗುರುಗಳು ದೇವರ ಸಮಾನರು. ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ದೀವಿಗೆ ಹಚ್ಚುವ ಗುರುಗಳನ್ನು ಹಾಗೂ ಬದುಕಿನಲ್ಲಿ ಮೊದಲ ಗುರುಗಳಾಗಿ ಮಾರ್ಗದರ್ಶನ ನೀಡಿದ ಮಾತಾ–ಪಿತರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಹಿರಿಯರನ್ನು ಗೌರವಿಸುವ ಹಾಗೂ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು. ಈ ಮೂಲಕ ಗುರುನಮನದಂತಹ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಚ್ಯುತಿ ಬಾರದಂತೆ ಮುಂದುವರಿಸಬೇಕು ಎಂದು ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ, ಕೊಲ್ಯದ ಗುರುಗಳಾದ ಡಾ. ಅರುಣ್ ಉಳ್ಳಾಲ್ ಹೇಳಿದರು.

ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಹಾಗೂ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ, ಕೊಲ್ಯ ಇದರ ಸಹಯೋಗದಲ್ಲಿ ಶಾಲಾ ಶಿಕ್ಷಕರು, ಪೋಷಕರು ಹಾಗೂ ಹಿರಿಯ ಜೀವಿಗಳಿಗೆ ಮಕ್ಕಳಿಂದ ಸಾಂಪ್ರದಾಯಿಕವಾಗಿ ಆರತಿ ಬೆಳಗಿಸುವ ಮೂಲಕ ‘ಗುರುನಮನ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಿತ್ಯಾನುಷ್ಠಾನ ಶ್ಲೋಕದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ಸರ್ವರನ್ನು ಸ್ವಾಗತಿಸಿ, ‘ಗುರುನಮನ’ ಕಾರ್ಯಕ್ರಮದ ಆಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.
‘ಪಂಚಾಮೃತ–2026’ ಸ್ಪರ್ಧಾ ವಿಜೇತರಿಗೆ ಬಹುಮಾನ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗಾಗಿ ಆನ್‌ಲೈನ್‌ನಲ್ಲಿ ಆಯೋಜಿಸಲಾಗಿದ್ದ ‘ಪಂಚಾಮೃತ–2026’ ಪಂಚಸ್ಪರ್ಧೆಗಳಾದ ಗುರು–ಶಿಷ್ಯರ ಭಾವಚಿತ್ರ ಸ್ಪರ್ಧೆ, ಭಾಷಣ, ಲೇಖನ, ಘೋಷವಾಕ್ಯ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಸ್ಪರ್ಧೆಗೆ ತೀರ್ಪುಗಾರರಾಗಿ ಸಹಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಬ್ಲಮೊಗರು ಇದರ ಸಹಶಿಕ್ಷಕಿ ಗೀತಾ ಕೆ. ಹಾಗೂ ನಿತಿನ್ ಕುಮಾರ್ (C.A. Aspirant – CA Final) ಅವರನ್ನು ಸಭಾ ವೇದಿಕೆಯಲ್ಲಿ ಗೌರವಿಸಲಾಯಿತು. ಸದಸ್ಯರಲ್ಲಿರುವ ಜ್ಞಾನ ಹಾಗೂ ಪ್ರತಿಭೆಯನ್ನು ಹೊರತರುವಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದು ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಪಂಚಾಮೃತ–2026’ರ ಸಮಗ್ರ ಬಹುಮಾನವನ್ನು ಸದಸ್ಯೆ ರಶ್ಮಿ ಸನಿಲ್ ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು. ಸ್ಪರ್ಧೆಯ ಸಂಚಾಲಕರಾದ ಘಟಕದ ಮಾಜಿ ಅಧ್ಯಕ್ಷ ಲತೀಶ್ ಎಂ. ಸಂಕೊಳಿಗೆ ಅವರ ನೇತೃತ್ವದಲ್ಲಿ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ, ಕೊಲ್ಯ ಇದರ ಸಂಚಾಲಕ ಜಗಜೀವನ್ ಕೊಲ್ಯ ಅವರು ಧನ್ಯವಾದ ಸಮರ್ಪಿಸಿದರು.







